ಮಡಿಕೇರಿ, ಅ. 19: ಪಾಲಿಬೆಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆಯುವಾಗ, ಕೇರಳ ಮೂಲದ ಮಹಿಳೆಯೊಬ್ಬರು ನಕಲಿ ಚಿನ್ನ ಇಟ್ಟಿರುವ ಹಗರಣ ಸಂಬಂಧ ಶೋಧ ಕಾರ್ಯ ಮುಂದುವರಿದಿದೆ.ಅಂದಾಜು ರೂ. 20ಲಕ್ಷಕ್ಕೂ ಅಧಿಕ ಮೌಲ್ಯ ಹೊಂದಿಕೊಂಡಿರುವ ಸಾಲಕ್ಕೆ ಒತ್ತೆ ಇರಿಸಿರುವ ಅಷ್ಟೂ ಚಿನ್ನ ನಕಲಿಯೆಂದು ಬಹಿರಂಗಗೊಂಡ ಬೆನ್ನಲ್ಲೇ ಆಡಳಿತ ಮಂಡಳಿ ಚಿನ್ನ ಪರಿವೀಕ್ಷಕರೊಬ್ಬರನ್ನು ನೇಮಿಸಿಕೊಂಡು ಹಿಂದಿನ ಕಾ.ನಿ. ಅಧಿಕಾರಿ ಉಪಸ್ಥಿತಿಯಲ್ಲಿ ಭದ್ರತಾ ಕೊಠಡಿ ಯಲ್ಲಿರುವ ಚಿನ್ನವನ್ನು ತಪಾಸಣೆ ಮುಂದುವರಿದಿದೆ.ಪಾಲಿಬೆಟ್ಟ ಪತ್ತಿನಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಚಿನ್ನದ ಮೇಲೆ ಆಭರಣ ಸಾಲ ಪಡೆದಿದ್ದು, ಈ ಹಗರಣದ ಬೆನ್ನಲ್ಲೇ ಇದೀಗ ಒಟ್ಟಾರೆ ಚಿನ್ನವನ್ನು ಅಸಲಿಯೋ ಅಥವಾ ನಕಲಿ ಸೇರಿಕೊಂಡಿದೆಯೇ ಎಂಬ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳಿಂದ ‘ಶಕ್ತಿ’ಗೆ ಗೊತ್ತಾಗಿದೆ. ಇನ್ನು ಎರಡು ದಿನಗಳ ಕಾಲಮಿತಿಯಲ್ಲಿ ತಪಾಸಣೆ ಮುಂದುವರಿಯಲಿದ್ದು, ಆ ಬಳಿಕ ಪತ್ತಿನ ಆಡಳಿತ ಮಂಡಳಿ ಮುಂದಿನ ಕಾನೂನು ಕ್ರಮದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ನಿರ್ದೇಶನ ಪಡೆಯುವ ಸಾಧ್ಯತೆ ಇದೆ.