ಸೋಮವಾರಪೇಟೆ, ಅ. 19: ಜಿಲ್ಲೆಯ ರಾಜಕಾರಣಿಯೋರ್ವರಿಗೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಭೂ ಮಂಜೂರಾತಿ ಮಾಡಿಕೊಟ್ಟಿರುವ ಸಂಶಯವಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಲ್. ನಾರಾಯಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸೀಗೆಹೊಸೂರು ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಕಾನೂನುಬಾಹಿರ ವಾಗಿ ರಾಜಾರಾವ್ ಹಾಗೂ ಕೆಲವರಿಗೆ ಪಹಣಿ ಪತ್ರ (ಆರ್‍ಟಿಸಿ) ಮಾಡಿಕೊಟ್ಟು ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಸೀಗೆಹೊಸೂರು ಗ್ರಾಮದ ಸರ್ವೆ ನಂ.13/1 ರಲ್ಲಿ 100ಎಕರೆ ಜಾಗವನ್ನು ಅಂದಿನ ಮೈಸೂರು ಸರ್ಕಾರ ತೋಟಗಾರಿಕೆ ಇಲಾಖೆಗೆ ಮಂಜೂರು ಮಾಡಿತ್ತು. ಈ ಜಾಗದಲ್ಲೇ ಹೆಗ್ಗಳ್ಳಿ ಗ್ರಾಮದಲ್ಲಿ 0.95 ಎಕರೆ ಹಾಗೂ ಸೀಗೆಹೊಸೂರು ಗ್ರಾಮದ ಸರ್ವೆ ನಂ.13/1ಪಿ ಯಲ್ಲಿ 4 ಎಕರೆ ಜಾಗವನ್ನು ರಾಜಾರಾವ್ ಹಾಗೂ ತೊರೆನೂರು ಗ್ರಾಮದ ಚಂದ್ರಪ್ಪ ಎಂಬವರಿಗೆ ಸೀಗೆಹೊಸೂರು ಗ್ರಾಮದಲ್ಲಿ 3 ಎಕರೆ ಜಾಗಕ್ಕೆ ಆರ್‍ಟಿಸಿ ನೀಡಿ ಕಂದಾಯ ಇಲಾಖೆ ಕಾನೂನು ಉಲ್ಲಂಘನೆ ಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.

ಗಿರಿಜನ ಮುಖಂಡ, ಬುಡಕಟ್ಟು ಜನಾಂಗದ ರಾಜ್ಯ ಸಂಚಾಲಕ ಎಂದು ಹೇಳಿಕೊಂಡು, ಗಿರಿಜನರ ಸೌಲಭ್ಯ ಗಳನ್ನು ಕಳೆದ 30 ವರ್ಷಗಳಿಂದ ಪಡೆದುಕೊಳ್ಳುತ್ತಿರುವ ವ್ಯಕ್ತಿ ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ ಎಂಬದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಗೋಷ್ಠಿಯಲ್ಲಿದ್ದ ಭೂದಾಖಲೆಗಳ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಕೆ.ಜೆ.ದುಂಡಪ್ಪ ಆರೋಪಿಸಿದರು.