ಕುಶಾಲನಗರ, ಅ. 20 : ಮುಳ್ಳುಸೋಗೆಯ ಕೋಣಮಾರಿಯಮ್ಮ ದೇವಿಯ 15ನೇ ವಾರ್ಷಿಕ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿತು.

ಶ್ರೀ ಕೋಣಮಾರಿಯಮ್ಮ ದೇವತಾ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮುಳ್ಳುಸೋಗೆಯ ಬಳಿ ಕಾವೇರಿ ನದಿಯಿಂದ ದೇವಿಯ ವಿಗ್ರಹದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕಳಸ ತಂದು ಪ್ರತಿಷ್ಠಾಪಿಸಲಾಯಿತು. ನಂತರ ಗಣಪತಿ ಹೋಮ, ಪೂಜಾ ವಿಧಿವಿಧಾನಗಳ ಬಳಿಕ ಮಧ್ಯಾಹ್ನ ದೇವಿಗೆ ಮಹಾಮಂಗಳಾರತಿ ಬೆಳಗಲಾಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪದಾಧಿಕಾರಿಗಳು ದೇವಾಲಯಕ್ಕೆ ಆಗಮಿಸಿ ಫಲಪುಷ್ಪ ಅರ್ಪಿಸಿ ಸಾಮೂಹಿಕ ಪೂಜೆ ನೆರವೇರಿಸಿದರು. ನಂತರ ಪ್ರಸಾದ ವಿನಿಯೋಗ ನಡೆಯಿತು. ಅರ್ಚಕ ಕುಳ್ಳಯ್ಯ ಪೂಜಾ ವಿಧಿ ನೆರವೇರಿಸಿದರು.

ಕುಶಾಲನಗರ, ಮುಳ್ಳುಸೋಗೆ, ಬೈಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ನೆರವೇರಿಸಿದ ದೃಶ್ಯ ಕಂಡುಬಂತು.

ಈ ಸಂದರ್ಭ ದೇವತಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಜೆ.ಸತೀಶ್, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಆರ್.ಸುರೇಶ್, ಸಹ ಕಾರ್ಯದರ್ಶಿ ಹೆಚ್.ಜೆ.ಲೋಕೇಶ್, ಖಜಾಂಚಿ ಕೇಶವ, ಮಾಜಿ ಅಧ್ಯಕ್ಷ ಚೆಲುವರಾಜು, ಶಿವಾನಂದ, ಧನರಾಜ್, ವಿಶ್ವನಾಥ್, ಲೋಕೇಶ್ ಸೇರಿದಂತೆ ಪದಾಧಿಕಾರಿಗಳು, ಸ್ಥಳೀಯ ದೇವಾಲಯಗಳ ಸಮಿತಿ ಒಕ್ಕೂಟ ಪ್ರಮುಖರು ಹಾಗೂ ದೇವತಾ ಸೇವಾ ಸಮಿತಿ ಸದಸ್ಯರು ಇದ್ದರು.