ಸೋಮವಾರಪೇಟೆ, ಅ. 19: ಮನೆಯ ಹಿಂಭಾಗದ ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಸುಮಾರು 8 ಕೆ.ಜಿ. ಗಾಂಜಾದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕೂತಿ ಗ್ರಾಮದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ರಾಜಪ್ಪ ಎಂಬವರ ಪುತ್ರ ಜಿತೇಂದ್ರ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಸೋಮವಾರಪೇಟೆ ಠಾಣಾಧಿಕಾರಿ ನೇತೃತ್ವದ ತಂಡ ನಿನ್ನೆ ಮುಂಜಾನೆ 3.30ಕ್ಕೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ತೋಟದಲ್ಲಿ ಬೆಳೆದಿದ್ದ 12 ಗಾಂಜಾ ಗಿಡಗಳನ್ನು ತಾಲೂಕು ತಹಶೀಲ್ದಾರ್ ಮಹೇಶ್ ಸಮ್ಮುಖದಲ್ಲಿ ಮಹಜರು ನಡೆಸಿ ವಶಕ್ಕೆ ಪಡೆದಿದ್ದಾರೆ.

ಡಿವೈಎಸ್‍ಪಿ ಸಂಪತ್‍ಕುಮಾರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿಗಳಾದ ಜಗದೀಶ್, ಮಹೇಂದ್ರ, ಕುಮಾರ್, ಶಿವಕುಮಾರ್, ರಮೇಶ್, ಚಾಲಕ ಕುಮಾರ್, ಅಪರಾಧ ವಿಭಾಗದ ಠಾಣಾಧಿಕಾರಿ ಮಂಚಯ್ಯ ಭಾಗವಹಿಸಿದ್ದರು.

ಗಾಂಜಾ ವ್ಯವಹಾರದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆಯಿದ್ದು, ತನಿಖೆಯ ನಂತರ ಹೆಚ್ಚಿನ ಮಾಹಿತಿ ದೊರಕಲಿದೆ.