ಕುಶಾಲನಗರ, ಅ 19: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ಘೋಷಣೆ ಮಾಡುವಂತೆ ಆಗ್ರಹಿಸಿ ಸ್ಥಳೀಯ ಸಂಘ ಸಂಸ್ಥೆಗಳು ನಿರಶನ ಕಾರ್ಯಕ್ರಮವನ್ನು ಮುಂದುವರೆಸಿದೆ. ಸ್ಥಳೀಯ ಕಾರು ನಿಲ್ದಾಣದ ಬಳಿ ನಡೆಯುತ್ತಿರುವ ಸರಣಿ ಸತ್ಯಾಗ್ರಹ 5ನೇ ದಿನ ಪೂರೈಸಿದೆ. 4ನೇ ದಿನದ ಹೋರಾಟದಲ್ಲಿ ಸ್ಥಳೀಯ ರೋಮನ್ ಕ್ಯಾಥೋಲಿಕ್ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು. ಕ್ರೈಸ್ತ ಸಂಘಟನೆ ಮುಖಂಡರಾದ ಬಿ.ಎಸ್. ಶಾಂತಪ್ಪ, ಎನ್.ಡಿ. ಜೋಸೆಫ್, ಕೆ.ಎಫ್. ಲಾರೆನ್ಸ್, ಕ್ರಿಜ್ವಲ್ ಪೌಲ್ ಮತ್ತಿತರರು ಸಂಜೆ ತನಕ ನಿರಶನದಲ್ಲಿ ತೊಡಗಿಸಿಕೊಂಡರು. 5ನೇ ದಿನದ ಹೋರಾಟ ಕರ್ನಾಟಕ ಕಾವಲು ಪಡೆ ನೇತೃತ್ವದಲ್ಲಿ ನಡೆಯಿತು. ರಂಗ ಗೀತೆ, ಭಕ್ತಿ ಗೀತೆ, ಕ್ರಾಂತಿ ಗೀತೆ ಹಾಡುವದರ ಮೂಲಕ ಹೋರಾಟಕ್ಕೆ ರಂಗು ಕಂಡುಬಂತು. ಲಿಮ್ಕಾ ದಾಖಲೆಯ ಕಲಾವಿದ ಹೆಬ್ಬಾಲೆಯ ವಿಜಯ ಕುಮಾರ್ ಅವರ ನಿರಂತರ ತಬಲ ವಾದನ, ನಂತರ ಮೈಸೂರು - ಮಡಿಕೇರಿ ಹೆದ್ದಾರಿಯಲ್ಲಿ ಹಾಡುತ್ತಾ ಕುಳಿತ ಸಂಘಟನೆಯ ಕಾರ್ಯಕರ್ತರು ಅರ್ಧ ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರ ತಡೆಹಿಡಿದು ಘೋಷಣೆ ಕೂಗಿದರು.

ಕಲಾವಿದ ಮಂಜು ನೇತೃತ್ವದಲ್ಲಿ ಗೀತ ಗಾಯನ ನಡೆಯಿತು. ಜಿಲ್ಲಾಧ್ಯಕ್ಷ ಎಂ.ಕೃಷ್ಣ ನೇತೃತ್ವದಲ್ಲಿ ನಡೆದ ನಿರಶನ ಕಾರ್ಯಕ್ರಮದಲ್ಲಿ ಸಂಘಟನೆ ಪದಾಧಿಕಾರಿಗಳಾದ ರಂಗಸ್ವಾಮಿ ಗೌಡ, ಪ್ರೇಮ, ಸುನಿತಾ, ಉನ್ನಿಕೃಷ್ಣ, ಅನೀಶ್, ಕುಮಾರ, ಹರೀಶ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಪ.ಪಂ. ಉಪಾಧ್ಯಕ್ಷ ಟಿ.ಆರ್. ಶರವಣ ಕುಮಾರ್, ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ನಗರಾಧ್ಯಕ್ಷ ಜಿ.ಎಲ್. ನಾಗರಾಜ್, ಮುಖಂಡರಾದ ಎಸ್.ಕೆ. ಸತೀಶ್, ಕೆ.ಎಸ್. ರಾಜಶೇಖರ್, ಫಜಲುಲ್ಲಾ, ಖಾದರ್. ಕೆ.ಬಿ. ರಾಜು ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ತಾ. 30ರ ರ್ಯಾಲಿಗೆ ಜನಬೆಂಬಲ ಪಡೆಯುವ ಸಲುವಾಗಿ ತಳಮಟ್ಟದಲ್ಲಿ ಸಂಘಟನೆ ಮಾಡಲು ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರೀಯ ಸಮಿತಿ ವಾರ್ಡ್ ಮಟ್ಟದಲ್ಲಿ ಸಮಿತಿಗಳ ರಚನಾ ಪ್ರಕ್ರಿಯೆ ನಡೆಸಲು ಮುಂದಾಗಿದೆ. ರ್ಯಾಲಿಯಲ್ಲಿ ವಾರ್ಡ್ ವ್ಯಾಪ್ತಿಯ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವದರೊಂದಿಗೆ ಯಶಸ್ವಿ ಹೋರಾಟಕ್ಕೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಕೇಂದ್ರ ಸಮಿತಿ ಸಂಚಾಲP ವಿ.ಪಿ. ಶಶಿಧರ್ ತಿಳಿಸಿದ್ದಾರೆ.