ಮಡಿಕೇರಿ, ಅ. 19: ತಿಂಗಳ ಹಿಂದೆ ಮಾಲ್ದಾರೆ ರಕ್ಷಿತಾರಣ್ಯದೊಳಗೆ ಅಕ್ರಮ ಪ್ರವೇಶಿಸಿ ಬೇಟೆಯಾಡುತ್ತಿದ್ದ ಆರೋಪ ಮೇರೆಗೆ, ಮೊಕದ್ದಮೆ ಎದುರಿಸುತ್ತಿರುವ ಇಬ್ಬರು ಆರೋಪಿಗಳು ವೀರಾಜಪೇಟೆ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದಿರುವದಾಗಿ ಮೂಲಗಳಿಂದ ತಿಳಿದು ಬಂದಿದೆ.
ಅಕ್ರಮ ಬೇಟೆಗೆ ಬಳಸಿದ್ದ ವಾಹನ ಹಾಗೂ ಕೋವಿಯೊಂದರ ಮಾಲೀಕನಾಗಿರುವ ಗ್ರಾ.ಪಂ. ಸದಸ್ಯ ದಿನೇಶ್ ಮತ್ತು ಇನ್ನೊಂದು ಕೋವಿಯ ಮಾಲೀಕ ಮೋಹನ್ ಎಂಬಿಬ್ಬರು ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವದಾಗಿ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ. ತಿಂಗಳ ಹಿಂದೆ ಅರಣ್ಯಾಧಿಕಾರಿ ಮಂಜುನಾಥ ಗೂಳಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯೊಂದಿಗೆ ಆರೋಪಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಮಾರ್ಷಲ್ ಜೀಪು (ಕೆ.ಎ. 02 ಝೆಡ್ 1292) ಸಹಿತ ಎರಡು ಕೋವಿ, ಕತ್ತಿಗಳು, ಟಾರ್ಪಾಲು, ಟಾರ್ಚ್ ಇತ್ಯಾದಿ ಮುಟ್ಟುಗೋಲು ಹಾಕಿಕೊಂಡಿದ್ದರು. ಸ್ಥಳೀಯರು ನೀಡಿದ್ದ ಮಾಹಿತಿ ಮೇರೆಗೆ ಆರು ಮಂದಿ ಬೇಟೆಗಾರರ ಪೈಕಿ ಗ್ರಾ.ಪಂ. ಸದಸ್ಯನ ಸಹಿತ ಕೆಲವರ ಸುಳಿವು ಪಡೆದಿದ್ದರು.
ಕಳೆದ ಸೆ. 9 ರಂದು ಈ ಕೃತ್ಯ ನಡೆದಿತ್ತು. ಇದೀಗ ಒಂದೂವರೆ ತಿಂಗಳ ಬಳಿಕ ಆರೋಪಿಗಳಿಬ್ಬರು ಜಾಮೀನು ಪಡೆದುಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗುವದರೊಂದಿಗೆ, ಅರಣ್ಯ ಇಲಾಖೆಯಿಂದಲೂ ಪ್ರತ್ಯೇಕ ತನಿಖೆ ನಡೆಯುತ್ತಿದೆ.