ಸೋಮವಾರಪೇಟೆ, ಅ. 20: ಕಾಡುಬೆಕ್ಕನ್ನು ಕಂಡ ಜನರು ಚಿರತೆ ಮರಿ ಎಂದು ಭಾವಿಸಿ ಆತಂಕಗೊಂಡ ಪ್ರಸಂಗ ಪಟ್ಟಣದ ಮಹದೇಶ್ವರ ಬ್ಲಾಕ್‍ನಲ್ಲಿ ಎದುರಾಯಿತು.
ಅಲ್ಲಿನ ನಿವಾಸಿಗಳು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಸಂದರ್ಭ, ಮಹದೇಶ್ವರ ಬ್ಲಾಕ್‍ನ ಪೊದೆಯಲ್ಲಿ ಚಿರತೆ ಸೇರಿಕೊಂಡಿದೆ ಎಂದು ದಿನೇಶ್ ಎಂಬವರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಿವಾಸಿಗಳು ಪೊದೆಯ ಪಕ್ಕ ತೆರಳಿದ್ದಾರೆ. ಅಲ್ಲಿ ಮಲಗಿದ್ದ ಚಿರತೆಯನ್ನೇ ಹೊಲುವ ಕಾಡುಬೆಕ್ಕನ್ನು ಕಂಡ ಭಯಗೊಂಡು ಅರಣ್ಯ ಇಲಾಖೆಗೆ ಫೋನಾಯಿಸಿದ್ದಾರೆ. ನಂತರ ಸಾರ್ವಜನಿಕರೊಬ್ಬರು ಧೈರ್ಯದಿಂದ ಕಾಡುಬೆಕ್ಕಿನ ಸಮೀಪಕ್ಕೆ ತೆರಳಿ ನೋಡಿದ್ದಾರೆ. ಕಾಲಿಗೆ ಗಾಯಗೊಂಡಿರುವ ಕಾಡುಬೆಕ್ಕು ನಿತ್ರಾಣ ಸ್ಥಿತಿಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಆಗಮಿಸಿದ್ದ ಎಆರ್‍ಎಫ್‍ಓ ಮಾದೇವ ನಾಯಕ್ ಹಾಗೂ ಸಿಬ್ಬಂದಿಗಳು ಕಾಡುಬೆಕ್ಕನ್ನು ಹಿಡಿದು ಪಶುಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು.
ಮುಂದಿನ 24 ಗಂಟೆಗಳ ಕಾಲ ಪ್ರಾಣಿಯ ಮೇಲೆ ಗಮನವಿರಿಸಿ ನಂತರ ಮೀಸಲು ಅರಣ್ಯಕ್ಕೆ ಬಿಡಲಾಗುವದು ಎಂದು ಆರ್‍ಎಫ್‍ಓ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.