ಒಡೆಯನಪುರ, ಅ. 20: ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳನ್ನು ನಿಯಂತ್ರಿಸುವದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಚೈಲ್ಡ್‍ಲೈನ್ ಸಂಸ್ಥೆಯ ಸೋಮವಾರಪೇಟೆ ತಾಲೂಕಿನ ಕಾರ್ಯಕರ್ತೆ ಬಿ.ಕೆ. ಕುಸುಮ ಅಭಿಪ್ರಾಯ ಪಟ್ಟರು.

ಸಮೀಪದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗುಡುಗಳಲೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕುಶಾಲನಗರದಲ್ಲಿರುವ ಕೊಡಗು ಜಿಲ್ಲಾ ಚೈಲ್ಡ್‍ಲೈನ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಸಮಾಜ ಆಧುನಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಸಾಮಾಜಿಕ ಪಿಡುಗುಗಳು ಕಡಿಮೆಯಾಗಿಲ್ಲ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳು ಭಿಕ್ಷಾಟನೆ ಮಾಡುವಂತಹ ವಿಲಕ್ಷಣ ಪ್ರಕರಣಗಳು ನಡೆಯುತ್ತಿರುವದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ ಎಂದರು. ಬಾಲ್ಯ ವಿವಾಹ, ಅಪ್ರಾಪ್ತ ವಯಸಿನ ಮಕ್ಕಳನ್ನು ದುಡಿಸಿಕೊಳ್ಳುವದು ಕಾನೂನಿನಲ್ಲಿ ಅಪರಾಧವಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಬಾಲ್ಯ ವಿವಾಹ, ಬಾಲ ಕಾರ್ಮಿಕ ಸಮಸ್ಯೆ, ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಮುಂತಾದ ಮಕ್ಕಳ ಮೇಲಾಗುತ್ತಿರುವ ಶೋಷಣೆಯನ್ನು ತಡೆಗಟ್ಟುವ ಸಲುವಾಗಿ ಹಲವು ಕಾಯಿದೆಗಳನ್ನು ತಂದಿದೆ. ಚೈಲ್ಡ್‍ಲೈನ್ ಸಂಸ್ಥೆ ಮಕ್ಕಳ ರಕ್ಷಣೆಗಾಗಿ ದೇಶದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಸೇವೆಗಾಗಿ ಕರ್ತವ್ಯನಿರ್ವಹಿಸುತ್ತಿದೆ ಎಂದರು. ಚೈಲ್ಡ್‍ಲೈನ್ ಸಂಸ್ಥೆ 1098 ಕ್ಕೆ ಉಚಿತ ದೂರವಾಣಿ ಕರೆ ಮಾಡಿ ಮಾಹಿತಿಯನ್ನು ನೀಡಿದರೆ ಸಂಸ್ಥೆ ಮಕ್ಕಳನ್ನು ರಕ್ಷಿಸಿದ ನಂತರ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಮಕ್ಕಳಿಗೆ ರಕ್ಷಣೆ ಮತ್ತು ಶಿಕ್ಷಣ ನೀಡುವ ವ್ಯವಸ್ಥೆ ಮಾಡುತ್ತದೆ ಎಂದರು.

ಅಂಗನವಾಡಿ ಕೇಂದ್ರದ ಶಿಕ್ಷಕಿ ಜಯಮ್ಮ ಮಾತನಾಡಿ, ರಾಜ್ಯ ಸರಕಾರ ಇದೀಗ ಮಾತೃ ಪೂರ್ಣ ಯೋಜನೆಯನ್ನು ಜಾರಿಗೊಳಿಸಿದೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ಸಲುವಾಗಿ ಗ್ರಾಮದ ಅಂಗವಾಡಿ ಕೇಂದ್ರದಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ. ಫಲಾನುಭವಿಗಳು ಮಾತೃ ಪೂರ್ಣ ಯೋಜನೆಯನ್ನು ಸದುಪಯೋಗಿಸಿ ಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಂಡ್ಲಿ ಗ್ರಾ.ಪಂ. ಸದಸ್ಯ ಸೋಮಶೇಖರ್, ಚೈಲ್ಡ್‍ಲೈನ್ ಸಂಸ್ಥೆಯ ನಯನ, ಅಂಬಿಕ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.