ಶ್ರೀಮಂಗಲ, ಅ. 19: ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕಾವೇರಿ ಚಂಗ್ರಾಂದಿ ಹಬ್ಬವನ್ನು ಜನೋತ್ಸವದ ರೀತಿಯಲ್ಲಿ ಹತ್ತು ದಿನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲು ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ಮುಂದಾಗಿದೆ.

ಕಾವೇರಿ ಪುಣ್ಯತೀರ್ಥವನ್ನು ಪೂಜಿಸಿ ನಾಡಿನ ಭಕ್ತಾದಿಗಳಿಗೆ ವಿತರಿಸುವದರೊಂದಿಗೆ ಹತ್ತು ದಿನಗಳ ಕಾರ್ಯಕ್ರಮಕ್ಕೆ ಕೊಡವ ಸಮಾಜ ಚಾಲನೆ ನೀಡಿದೆ.

ಈ ಸಂದರ್ಭ ಮಾತನಾಡಿದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್‍ಅಪ್ಪಣ್ಣ ಅವರು ಕೊಡವ ಸಮಾಜವು ಕೇವಲ ಮದುವೆ ಮಂಟಪ ಆಗಬಾರದು. ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೇಂದ್ರವಾಗಬೇಕು. ಸಂಸ್ಕøತಿ ಉಳಿಯಬೇಕಾದರೆ ಹಬ್ಬ ಹರಿದಿನಗಳ ಆಚರಣೆ ಪ್ರಮುಖ ಪಾತ್ರ ವಹಿಸುತ್ತದೆ. ಕುಲದೇವಿ ಕಾವೇರಿ ಮಾತೆಯ ಹಬ್ಬವಾದ ಚಂಗ್ರಾಂದಿಯನ್ನು ಕಾವೇರಿ ಪುಣ್ಯತೀರ್ಥ ವಿತರಿಸುವದರೊಂದಿಗೆ ಪ್ರಾರಂಭಿಸಿದ್ದೇವೆ. ದಸರಾ ಹಾಗೂ ಗೌರಿ ಗಣೇಶ ಉತ್ಸವದಂತೆ ಚಂಗ್ರಾಂದಿ ಹಬ್ಬವನ್ನು ಜನೋತ್ಸವದ ರೀತಿಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ‘ಪತ್ತಾಲೋದಿ’ ತಾ. 27ರ ವರೆಗೆ ಸಂಜೆ ನಾಲ್ಕು ಗಂಟೆಯಿಂದ ಆರುವರೆ ಗಂಟೆಯವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಡಿನ ಜನರು ಪ್ರತಿ ದಿನ ಸಂಜೆ ನಾಲ್ಕು ಗಂಟೆಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಕೋರಿದರು.

ತಾವಳಗೇರಿ ಮೂಂದ್‍ನಾಡ್‍ನ ನಾಡ್ ತಕ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿ, ಚಂಗ್ರಾಂದಿ ಹಬ್ಬವು ಸೂರ್ಯ ತುಲಾ ರಾಶಿಗೆ ಪ್ರವೇಶಿಸುವ ಅಮೃತ ಗಳಿಗೆಯಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉಕ್ಕುವ ಶುಭ ಗಳಿಗೆಯಿಂದ ಮೊದಲುಗೊಂಡು ಹತ್ತು ದಿನಗಳ ಅವಧಿಯ ಪತ್ತಲೋದಿವರೆಗೆ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಹಬ್ಬದ ಆಚರಣೆಯು ಕ್ಷೀಣಿಸುತ್ತಿದ್ದು, ಕೊಡವ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಾವು ಈ ವರ್ಷದಿಂದ ಚಂಗ್ರಾಂದಿಯನ್ನು ಪತ್ತಾಲೋದಿಯವರೆಗೆ ಜನೋತ್ಸವದ ರೀತಿಯಲ್ಲಿ ನಡೆಸಲು ಚಾಲನೆ ನೀಡಿದ್ದೇವೆ ಎಂದರು.