ಮಡಿಕೇರಿ, ಅ. 19 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಅಶ್ವಿನಿ ಆಸ್ಪತ್ರೆ ಸಭಾಭವನ ದಲ್ಲಿ ಟಿ.ಎಸ್.ಪಿ., ಎಸ್.ಸಿ.ಪಿ ತಾಲೂಕು ಮಟ್ಟದ ಆಯುಷ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಹಾಗೂ ಆರ್ಯುವೇದ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಪುರಾತನ ಕಾಲದ ಆರ್ಯುವೇದ ಪದ್ಧತಿಯನ್ನು ರೂಢಿಸಿಕೊಂಡು ಉತ್ತಮ ಆರೋಗ್ಯವನ್ನು ಪಡೆದು ಆರೋಗ್ಯವಂತರಾಗುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ ಅವರು ಆರ್ಯುವೇದವು 5 ಸಾವಿರ ವರ್ಷ ಗಳಿಂದ ಇರುವ ವೈದ್ಯಕೀಯ ಪದ್ಧತಿ ಹಾಗೂ ಸುಲಭವಾಗಿ ದೊರೆಯು ವಂತಹ ಚಿಕಿತ್ಸಾ ವಿಧಾನ ಎಂದು ತಿಳಿಸುತ್ತಾ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯಾಗಾರದ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಆಯುಷ್ ವೈದ್ಯ ಡಾ. ಎಂ. ಬಿ. ಶ್ರೀನಿವಾಸ್ ಅವರು “ಆರ್ಯುವೇದದಲ್ಲಿ ನೋವು ನಿವಾರಣೆ ಬಗ್ಗೆ ಮಾಹಿತಿ ನೀಡುತ್ತಾ ಆರ್ಯುವೇದವು ಕೇವಲ ಔಷಧ ಪದ್ಧತಿಯಲ್ಲ. ಆರ್ಯುವೇದದ ಉದ್ದೇಶವು ನಮ್ಮ ಆರೋಗ್ಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವದು ಮತ್ತು ನಮ್ಮ ಸುತ್ತಮುತ್ತಲಿನ ವಾತಾವರಣ ವನ್ನು ಸ್ವಚ್ಛವಾಗಿ ಇಟ್ಟುಕೊಂಡು ಆರೋಗ್ಯ ಗಳಿಸುವಂತಹ ಪದ್ಧತಿ. ಮಾಲಿನ್ಯದಿಂದಾಗಿ ಖಾಯಿಲೆಗಳು ಉತ್ಪತ್ತಿಯಾಗುತ್ತದೆ. ನೀರಿನ ಮಾಲಿನ್ಯದಿಂದ ಹೆಚ್ಚು ರೋಗಗಳು ಉತ್ಪತ್ತಿಯಾಗುತ್ತವೆ. ಪ್ರಕೃತಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವದು ಉತ್ತಮ. ಇದರಿಂದ ಖಾಯಿಲೆಗಳು ದೂರವಾಗುತ್ತವೆ. ಮನೋಬಲ, ಆತ್ಮಬಲ ವೃದ್ಧಿಯಿಂದ ಯಾವದೇ ನೋವು ಬರುವದಿಲ್ಲ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಆರ್ಯುವೇದದ ಬಗ್ಗೆ ತಿಳಿದು ಕೊಂಡು ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಒತ್ತಡ ನಿವಾರಣೆಯಿಂದ ಉತ್ತಮ ಆರೋಗ್ಯ ಪಡೆಯುವಂತೆ ಸಲಹೆ ಮಾಡಿದರು. ಅಶ್ವಿನಿ ಆಸ್ಪತ್ರೆಯ ಅಧ್ಯಕ್ಷ ಡಾ. ಕುಲಕರ್ಣಿ ಮಾತನಾಡಿ, ಆರ್ಯುವೇದ ಪದ್ಧತಿಯ ವಿಶೇಷತೆ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.