ಗುಡ್ಡೆಹೊಸೂರು, ಅ. 19: ಗುಂಪಿನಿಂದ ಬೇರ್ಪಟ್ಟ ಮರಿ ಆನೆಯೊಂದು ದಾರಿ ತಪ್ಪಿ ಕಾಡಲೆಲ್ಲ ಅಲೆದು ತನ್ನವರು ಸಿಗದಿದ್ದಾಗ ಎದುರಿಗೆ ಕಂಡ ತೂಗು ಸೇತುವೆಯನ್ನೇರಿ ಸೇತುವೆ ದಾಟಿ ಗ್ರಾಮಕ್ಕೆ ಕಾಲಿಟ್ಟು ಜೋಳದ ಹೊಲದಲ್ಲಿ ಸೇರಿಕೊಂಡ ಪ್ರಸಂಗ ನಡದಿದೆ.ತಾ. 17ರ ರಾತ್ರಿ 12 ಗಂಟೆ ಸಮಯದಲ್ಲಿ ಗುಡ್ಡೆಹೊಸೂರು ಹೆದ್ದಾರಿ ಬಳಿ ತಾಯಿಯಿಂದ ಬೇರೆಯಾಗಿ ರಸ್ತೆಯಲ್ಲಿ ಬರುತ್ತಿದ್ದ ಮರಿಯಾನೆಯನ್ನು ರಾತ್ರಿ ಗಸ್ತು ನಡೆಸುತ್ತಿದ್ದ ಕುಶಾಲನಗರದ ‘ಹೈವೆ ಪೆಟ್ರೋಲ್’ ವಾಹನದಲ್ಲಿದ್ದ ಅಧಿಕಾರಿ ರವಿ ಕಂದು ವನಪಾಲಕ ರಂಜನ್ ಅವರಿಗೆ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿಗಳು ರಾತ್ರಿಯೇ ಅಕ್ಕಪಕ್ಕದ ಜೋಳದ ಹೊಲದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ನಿನ್ನೆ ಮುಂಜಾನೆ ಹೇರೂರು ರಸ್ತೆಯ ಆನೆ ಕಂದಕದ ಬಳಿ ಪತ್ತೆಯಾದ ಮರಿಯನ್ನು ಸ್ಥಳೀಯರಾದ ಮಹೇಶ್, ಪುಟ್ಟ ಗುರುಬಸಪ್ಪ ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳ ಸಹಕಾರದೊಂದಿಗೆ ಹಿಡಿದು ರಸ್ತೆಬದಿಯ ಮರಕ್ಕೆ ಕಟ್ಟಿಹಾಕಿ ನಂತರ ಕುಶಾಲನಗರದ ಗಂಧದÀ ಕೋಟೆಗೆ ಸಾಗಿಸಲಾಯಿತು. ಹಗ್ಗದಲ್ಲಿ ಮರಕ್ಕೆ ಕಟ್ಟಿದ್ದ ಸಂದÀರ್ಭ ತನ್ನ ತಾಯಿಗಾಗಿ ಜೋರಾಗಿ ಕಿರುಚುತ್ತಾ, ಸೊಂಡಿಲಿ ನಿಂದ ನೆಲಕ್ಕೆ ತಿವಿಯುತ್ತಾ ತನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಮರಿ ಎಲ್ಲಿಂದ ಬಂದಿತೆಂದು ಅರಣ್ಯಾಧಿ ಕಾರಿಗಳು ಶೋಧಿಸಿದಾಗ ಈ ಮರಿ ಗಡಿ ಭಾಗ ರಾಣಿ ಗೇಟ್ ಅರಣ್ಯ ದಿಂದ ಗುಂಪಿನಿಂದ ಬೇರ್ಪಟ್ಟು ಬಂದಿರುವದು ತಿಳಿದು ಬಂದಿದೆ.
ಅಲ್ಲದೆ ರಾತ್ರಿ ಮರಿಯಾನೆ ತೆಪ್ಪದ ಕಂಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿರುವ ತೂಗು ಸೇತುವೆ ಮೇಲೆ ಬರುತ್ತಿದ್ದುದನ್ನು ಕಂಡಿರುವ ಪ್ರತ್ಯಕ್ಷದರ್ಶಿಗಳೂ ಕೂಡ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪತ್ತೆ ಕಾರ್ಯ ಸುಲಭವಾಗಿದ್ದು, ಇದೀಗ ಮರಿಯನ್ನು ರಾಣಿಗೇಟ್ ಬಳಿ ಅರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
-ಗಣೇಶ್ ಕುಡೆಕಲ್