ನಾಪೆÇೀಕ್ಲು, ಅ. 19: ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿಲ್ಲ ಎಂಬ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಲಕ್ಷಾಂತರ ಮಂದಿ ಕಾವೇರಿ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಜಿಲ್ಲೆಯ ದಿನಪತ್ರಿಕೆಯ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿದ್ದಾಟಂಡ ಜಿನ್ನು ನಾಣಯ್ಯ ಎಲ್ಲಾ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದವರಿಗೆ ತಲಕಾವೇರಿಯಲ್ಲಿ ತೀರ್ಥೋದ್ಭವ ವಾಗಿರುವದು ಗೋಚರಿಸಿದೆ. ಆದರೆ ಸ್ಥಳೀಯ ಪತ್ರಿಕೆಯೊಂದಕ್ಕೆ ಮಾತ್ರ ಏಕೆ ಗೋಚರಿಸಲಿಲ್ಲ? ಕಾವೇರಿ ಮಾತೆಯ ಬಗ್ಗೆ ಇಲ್ಲದ ಆರೋಪ ಹೊರಿಸುವದು ಸರಿಯೇ ಎಂದು ಪ್ರಶ್ನಿಸಿದರು. ತೀರ್ಥೋದ್ಭವದ ಸಮಯದಲ್ಲಿ ಲಕ್ಷಾಂತರ ಜನ ಕಾವೇರಿ ಕುಂಡಿಕೆಯಿಂದ ತೀರ್ಥವನ್ನು ಕೊಂಡೊಯ್ಯುತ್ತಾರೆ. ಆದರೂ ಕುಂಡಿಕೆಯ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವಾಗುವದಿಲ್ಲ. ಈ ತೀರ್ಥವನ್ನು ವರ್ಷಾನುಗಟ್ಟಲೆ ಮನೆಯಲ್ಲಿರಿಸಿದರೂ ಕೆಡುವದಿಲ್ಲ. ಇದು ಕಾವೇರಿ ಮಾತೆಯ ಶಕ್ತಿಗೆ ಉದಾಹರಣೆಯಾಗಿದೆ. ಈ ಜ್ಞಾನ ಪತ್ರಿಕೆಗೆ ಇಲ್ಲದಿರುವದು ದುರದೃಷ್ಟಕರ. ಇನ್ನಾದರೂ ಜನತೆಯ ಭಾವನೆಗೆ ಧಕ್ಕೆ ಬರದಂತೆ ವರ್ತಿಸಲಿ ಎಂದರು.
ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ತೀರ್ಥೋದ್ಭವದ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದರೆ ಕ್ಷೇತ್ರದ ತಂತ್ರಿಗಳು, ಸಂಬಂಧಿಸಿದ ತಕ್ಕಮುಖ್ಯಸ್ಥರು, ಜಿಲ್ಲಾಧಿಕಾರಿಗಳಿದ್ದಾರೆ. ಅದನ್ನು ಹೊರತುಪಡಿಸಿ ಪತ್ರಿಕೆಯಲ್ಲಿ ಕಾವೇರಿ ಮಾತೆಯ ಬಗ್ಗೆ ಕೀಳಾಗಿ ಬರೆಯುವದು ಸರಿಯಲ್ಲ. ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡದಿರಲಿ ಎಂದರು.
ಎನ್.ಎಸ್. ಉದಯ ಶಂಕರ್ ಮಾತನಾಡಿ ತೀರ್ಥೋದ್ಭವ ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ದೈವಿಕ ಪ್ರಕ್ರಿಯೆ. ಯಾವದೇ ದೇವಿಗೂ ಕುಂಕುಮಾರ್ಚನೆ ಸೇವೆ ಅತ್ಯಂತ ಶ್ರೇಷ್ಠವಾದುದು. ಅದರ ಕಾರಣದಿಂದ ಕುಂಡಿಕೆಗೆ ಕುಂಕುಮ, ಹೂ ಹಾಕಲಾಗುತ್ತದೆ. ಅಲ್ಲಿನ ಅರ್ಚಕರು ವಂಶ ಪಾರಂಪರ್ಯವಾಗಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ತೀರ್ಥೋದ್ಭವದ ಸಮಯದಲ್ಲಿ ಯಾವ ಕ್ರಮ ಅನುಸರಿಸಬೇಕೆಂಬದು ಅವರಿಗೆ ತಿಳಿದಿದೆ. ಆಚಾರ-ವಿಚಾರ ಅರಿಯದೆ ಅರ್ಚಕರ ವೈಯಕ್ತಿಕ ನಿಂದÀನೆ ಸರಿಯಲ್ಲ ಎಂದರು.
ಪಾಡಿಯಮ್ಮಂಡ ಮನು ಮಹೇಶ್ ಮಾತನಾಡಿ ಪತ್ರಿಕೆಯ ವಿರುದ್ಧ ಮೊಕದ್ದಮೆ ದಾಖಲಿಸಲಾಗುವದು ಎಂದರು. ಕಂಗಾಂಡ ಜಾಲಿ ಪೂವಪ್ಪ ಪತ್ರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಬಿದ್ದಾಟಂಡ ರೋಹಿಣಿ ಸುಬ್ಬಯ್ಯ, ಕೇಲೇಟಿರ ಸಾಬು ನಾಣಯ್ಯ, ಕುಂಡ್ಯೋಳಂಡ ಸಂಪತ್ ದೇವಯ್ಯ, ನೆಡುಮಂಡ ಕೃತಿ, ಕೇಟೋಳಿರ ರೆಮ್ಮಿ ಅಯ್ಯಪ್ಪ, ಚಿಲ್ಲನ ಕಿರಣ್, ಕಲ್ಯಾಟಂಡ ಸುಮಿತ್ರ ದೇವಯ್ಯ, ಬಿದ್ದಾಟಂಡ ಚಷ್ಮಾ, ನಿಡುಮಂಡ ಕೃತಿ ಇದ್ದರು.
-ಪ್ರಭಾಕರ್, ದುಗ್ಗಳ