ಮಡಿಕೇರಿ, ಅ.19 : ಕಾವೇರಿ ನದಿ ಮತ್ತು ಕೊಡಗಿನ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಭೂ ಪರಿವರ್ತನೆ ಮಾಡಬಾರದು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮಾರ್ಗಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿರುವ ಕೊಡಗು ವನ್ಯಜೀವಿ ಸಂಸ್ಥೆಯ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರ ಗಮನ ಸೆಳೆಯಲಾಗುವದೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ಹಾಗೂ ಕೊಡಗಿನ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ರಾಜಕೀಯ ಬೆರೆಸದೆ ಎಲ್ಲರು ಒಗ್ಗಟ್ಟಾಗಿ ಜಲಮೂಲ ಮತ್ತು ಪ್ರಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದರು. ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗುವ ಸಂದರ್ಭ ಮಾತ್ರ ಕೊಡಗನ್ನು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ನಂತರದ ದಿನಗಳಲ್ಲಿ ಕಾವೇರಿಯ ಪವಿತ್ರ ಭೂಮಿಯನ್ನು ಮರೆತು ಬಿಡುತ್ತಾರೆ. ಸುಮಾರು 8 ಕೋಟಿ ಜನರು ಕಾವೇರಿ ನದಿ ನೀರನ್ನು ಅವಲಂಬಿಸಿದ್ದಾರೆ. ಕಾವೇರಿ ನದಿ ಹುಟ್ಟುವ ಪ್ರದೇಶ ಹಸಿರಾಗಿರಬೇಕು ಎನ್ನುವ ಅಭಿಲಾಷೆ ಹಲವರಲ್ಲಿದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಮೂರು ಸಾವಿರ ಏಕರೆ ಭೂಮಿ ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಹೈಟೆನ್ಶನ್ ವಿದ್ಯುತ್ ಮಾರ್ಗಕ್ಕಾಗಿ 54 ಸಾವಿರ ಮರಗಳನ್ನು ನಾಶ ಮಾಡಲಾಗಿದೆ. ಇದರೊಂದಿಗೆ ಕೊಡಗಿನ ನದಿ, ತೊರೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಜಲಮಾಲಿನ್ಯ ಮಿತಿಮೀರಿದ್ದು ಕಲುಷಿತ ವಾತಾವರಣವಿದೆ. ಇದೆಲ್ಲದರ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ಮಾರ್ಗ ನಿರ್ಮಾಣದ ಆತಂಕ ಎದುರಾಗಿದೆ ಎಂದು ಸಿ.ಪಿ.ಮುತ್ತಣ್ಣ ಹೇಳಿದರು.
ಪ್ರಸ್ತುತ ಇರುವ ರಸ್ತೆಗಳನ್ನೇ ಕೊಂಚ ವಿಸ್ತರಿಸಿ ಅಭಿವೃದ್ಧಿ ಪಡಿಸಲು ನಮ್ಮ ವಿರೋಧವಿಲ್ಲ. ಕಾಫಿ ತೋಟಗಳು ಸೇರಿದಂತೆ ಮರಗಳನ್ನು ನಾಶ ಮಾಡಿ ರಸ್ತೆ ವಿಸ್ತರಿಸುವದಕ್ಕೆ ನಮ್ಮ ವಿರೋಧವಿದೆಯೆಂದರು. ಕುಶಾಲನಗರದ ಕೊಪ್ಪದವರೆಗೆ ರೈಲ್ವೆ ಮಾರ್ಗ ಬರುವ ಅಗತ್ಯವಿಲ್ಲವೆಂದ ಕರ್ನಲ್ ಸಿ.ಪಿ.ಮುತ್ತಣ್ಣ, ಕುಶಾಲನಗರದವರೆಗೆ ಅವಕಾಶ ನೀಡಿದರೆ, ಮಕ್ಕಂದೂರಿನವರೆಗೂ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅರಣ್ಯಾಧಿಕಾರಿಗಳು ಗಮನ ಹರಿಸುವ ಅಗತ್ಯವಿದೆ. ಈಗಾಗಲೆ ಈ ಬಗ್ಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವಂತೆ ತಿಳಿಸಲಾಗಿದೆ. ವನ್ಯ ಜೀವಿ ಸಂಸ್ಥೆಯ ಮೂಲಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ನದಿ ಮೂಲ ಮತ್ತು ಹಸಿರ ಪರಿಸರದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುವದೆಂದರು.
ಪ್ರಮುಖರಾದ ಬಿ.ಸಿ.ಮಾದಯ್ಯ ಮಾತನಾಡಿ, ಪವಿತ್ರ ಕ್ಷೇತ್ರ ತಲಕಾವೇರಿ ಇಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಕೊಡಗಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆÀಯೆಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ಇತರ ದೇಗುಲಗಳಲ್ಲಿ ಇರುವಂತೆ ಭಕ್ತಾದಿಗಳ ಭೇಟಿಗೆ ಅಗತ್ಯ ನಿರ್ಬಂಧಗಳನ್ನು ವಿಧಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ.
ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳು ಗಮನ ಹರಿಸಿ ರೂಪು ರೇಷೆಗಳನ್ನು ಸಿದ್ದಪಡಿಸಬೇಕೆಂದು ಮಾದಯ್ಯ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡವ ಮಕ್ಕಡ ಕೂಟದ ಉಪಾಧ್ಯಕ್ಷ ಪ್ರತೀಶ್ ಪೂವಯ್ಯ, ಪ್ರಮುಖರಾದ ಮೋನಿಶ್ ಸುಬ್ಬಯ್ಯ ಹಾಗೂ ರಾಯ್ ಬೋಪಣ್ಣ ಉಪಸ್ಥಿತರಿದ್ದರು.