ಮೂರ್ನಾಡು, 19: ಕಾವೇರಿ ನದಿ ತೀರದ ಇತಿಹಾಸ ಪ್ರಸಿದ್ದ ಬಲಮುರಿಯ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯ ಅತ್ಯಧಿಕ ಭಕ್ತಾಧಿಗಳ ಸಮ್ಮ್ಮುಖದಲ್ಲಿ ಬುಧವಾರ ಜರುಗಿತು. ಪ್ರತಿವರ್ಷ ತಲಕಾವೇರಿಯಲ್ಲಿ ಕಾವೇರಿ ತೀಥೋದ್ಭವದ ಮರುದಿನ ಎರಡು ದೇವಾಲಯಗಳಲ್ಲಿ ತುಲಾ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಈ ಬಾರಿ ಅಗಸ್ತ್ಯೇಶ್ವರ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಐತಾಳ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿತು. ದೇವರಿಗೆ ಕರ್ಪೂರಾರತಿ, ರುದ್ರಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತಾದಿಗಳು ತೀರ್ಥ ಪ್ರಸಾದ ಸ್ವೀಕರಿಸಿದರು.
ಕಾವೇರಿ ನದಿಯ ಎಡಭಾಗದಲ್ಲಿರುವ ಶ್ರೀ ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡು ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೊದಲು ಕಾವೇರಿ ಕಣ್ವ ಮುನೀಶ್ವರ ದೇವಾಲಯಕ್ಕೆ ಸಾಗಿ ಹಣ್ಣುಕಾಯಿ ಪೂಜೆ ಸಲ್ಲಿಸಿ ಅಲ್ಲಿಂದ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬಲಮುರಿ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡಂಗೇರಿ ಸುತ್ತಮುತ್ತಲು ಗ್ರಾಮಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳಿದರು. ಕಾವೇರಿ ನದಿಯ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡಾರ್ಪಣೆ ಕಾರ್ಯಗಳು ನಡೆದವು.
ಪ್ರತಿವರ್ಷಕ್ಕಿಂತ ಈ ಬಾರಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರ ಸಂಖ್ಯೆ ಅಧಿಕಗೊಂಡಿತು. ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಭಕ್ತಾದಿಗಳು ದೇವಾಲಯಕ್ಕೆ ಬಂದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದ ಹೊರಭಾಗಗಳಲ್ಲಿ ಆಟದ ಸಾಮಗ್ರಿ ಮಳಿಗೆಗಳು, ತಿಂಡಿತಿನಿಸುಗಳ ವ್ಯಾಪಾರ ಭರದಿಂದ ಸಾಗಿತು. ಮಧ್ಯಾಹ್ನ ನೆರೆದ ಭಕ್ತಾಧಿಗಳಿಗೆ ಬಲಮುರಿ ಗ್ರಾಮದ ಮೇಡ್ತನ ಕುಟುಂಬಸ್ಥರಿಂದ ಅನ್ನಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ಪೊನ್ನಚ್ಚನ ಜಯ, ಕಾವೇರಿ ಕಣ್ವ ಮುನೀಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಎಂ. ಅಪ್ಪಚ್ಚು, ಕಾರ್ಯದರ್ಶಿ ಚೆಯ್ಯಂಡ ಗಣಪತಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.