ಶನಿವಾರಸಂತೆ, ಅ. 20: ಶನಿವಾರಸಂತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾರತ ಕಾಫಿ ಮಂಡಳಿಯ ಶನಿವಾರಸಂತೆ ವಿಸ್ತರಣಾ ವಿಭಾಗದಿಂದ ಬೆಳಾರಳ್ಳಿ-ಹಂಡ್ಲಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ವ್ಯಾಪಿಸಿರುವ ಆಫ್ರಿಕನ್ ದೈತ್ಯ ಹುಳು ನಿಯಂತ್ರಣಗೊಳಿಸಲು ಬೆಳೆಗಾರರಿಗಾಗಿ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಉದ್ಘಾಟಿಸಿ, ಮಾತನಾಡಿದರು.
ಬೆಳೆಗಾರರ ಹೋರಾಟಕ್ಕೆ ಕೃಷಿ ಮಂಡಳಿ ಕೈಜೋಡಿಸಿದ್ದು ಶಂಕುಹುಳ ನಿಯಂತ್ರಣಕ್ಕಾಗಿ ಕಾಫಿ ಮಂಡಳಿ ವತಿಯಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ನಿಯಂತ್ರಣ ಸಾಮಗ್ರಿ (ಕಿಟ್) ಒದಗಿಸಲಾಗುತ್ತಿದೆ ಎಂದರು.
ಕಾಫಿ ಮಂಡಳಿ ಜಂಟಿ ನಿರ್ದೇಶಕ ಹೇಮಂತ್ ಕುಮಾರ್, ಕಾಫಿ ಮಂಡಳಿ ಉಪ ನಿರ್ದೇಶಕ ರಾಮಗೌಂಡರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ವಿಜ್ಞಾನಿ ಡಾ. ಜಗದೀಶ್‍ಚಂದ್ರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಮಂಡಳಿ ನಿರ್ದೇಶಕ ಎಂ.ಬಿ. ಅಭಿಮನ್ಯು ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಹೆಚ್.ವಿ. ದಿವಾಕರ, ನಿರ್ದೇಶಕ ಎಸ್.ಸಿ. ಶರತ್‍ಶೇಖರ್, ಕಾಫಿ ವಿಸ್ತರಣಾ ಕೇಂದ್ರದ ಮುರುಳಿಧರ್, ಇತರರು ಉಪಸ್ಥಿತರಿದ್ದರು. ಡಿ.ಬಿ. ಧರ್ಮಪ್ಪ ವಂದಿಸಿದರು.