ಶ್ರೀಮಂಗಲ, ಅ. 20: ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಂಕೋನ ಕಾಲೋನಿಯ ಸಮೀಪ ನೂತನವಾಗಿ ತೆರೆಯಲು ಮುಂದಾದ ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಯಿತು. ಮದ್ಯದಂಗಡಿ ತೆರೆಯುವ ಮುನ್ಸೂಚನೆ ದೊರೆತು ನೂರಾರು ಮಹಿಳೆಯರು ಸೇರಿದಂತೆ ಸಿಂಕೋನ ಕಾಲೋನಿ ನಿವಾಸಿಗಳು ಮದ್ಯದಂಗಡಿಯ ಗೇಟಿನ ಮುಂದೆ ಜಮಾಯಿಸಿ ಮದ್ಯದಂಗಡಿ ತೆರೆಯದಂತೆ ತಡೆ ಮಾಡಿದರು. ಈಗಾಗಲೇ ಸಿಂಕೋನ ಕಾಲೋನಿಯ ಸುತ್ತಮುತ್ತ ಆಕ್ರಮ ಗಾಂಜಾ ಮಾರಾಟವಾಗುತ್ತಿದೆ .ಅಪ್ರಾಪ್ತ ಮಕ್ಕಳು ಸಹ ವ್ಯಸನಿಗಳಾಗಿ ದಾರಿ ತಪ್ಪುತ್ತಿದ್ದಾರೆ .ಇದೀಗ ಕಾಲೋನಿಗೆ ಕೂಗಳತೆಯಲ್ಲಿ ಮದ್ಯದಂಗಡಿ ತೆರೆಯುವ ಮೂಲಕ, ಬಾಲಕರು ಮದ್ಯ ಸೇವನೆಯಲ್ಲೂ ತೊಡಗಿಸಿಕೊಳ್ಳುವ ಆತಂಕವನ್ನು ಪ್ರತಿಭಟನೆಕಾರರು ವ್ಯಕ್ತಪಡಿಸಿದರು. ಇದಲ್ಲದೆ ಕೇರಳ ಗಡಿಯ ಅರ್ಧ ಕಿ.ಮೀ. ಅಂತರದಲ್ಲಿ ಈ ಮದ್ಯದಂಗಡಿ ತೆರೆಯುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಕೇರಳದ ಜನರು, ಅಪರಿಚಿತರು ಮದ್ಯ ಸೇವನೆಗೆ ಬರುತ್ತಾರೆ. ಸಮೀಪದಲ್ಲೇ ಕಾಲೋನಿ, ಅಂಗನವಾಡಿ ಇರುವದರಿಂದ ಮದ್ಯದ ನಶೆಯಲ್ಲಿ ಕುಡುಕರು ಅಹಿತಕರ ಘಟನೆಗೆ ಅಸ್ಪದ ಮಾಡಿಕೊಡುವ ಆತಂಕವಿದೆ. ಯಾವದೇ ಕಾರಣಕ್ಕೆ ತೆರೆಯಲು ಅವಕಾಶ ನೀಡಬಾರದು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಜನರ ವಿರೋಧದ ನಡುವೆಯೂ ಮದ್ಯದಂಗಡಿ ತೆರೆಯಲು ಮುಂದಾದರೆ ನಿರಂತರ ಪ್ರತಿಭಟನೆ ನಡೆಸಲಾಗುವದು. ಮುಂದೆ ಅಹಿತಕರ ಘಟನೆಗೆ ಅಸ್ಪದವಾದರೆ ಅದಕ್ಕೆ ಸಂಬಂಧಿಸಿದ ಇಲಾಖೆಯೆ ನೇರ ಹೊಣೆಯೆಂದು ಎಚ್ಚರಿಸಿದರು .
ಈ ಸಂದರ್ಭ ಗ್ರಾ. ಪಂ. ಅಧ್ಯಕ್ಷೆ ಲಿಲಾವತಿ, ಉಪಾಧ್ಯಕ್ಷ ಪ್ರಕಾಶ್ ಉತ್ತಪ್ಪ, ತಾ. ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್.ವೈ ರಾಮಕೃಷ್ಣ ಅವರು ಮಾತನಾಡಿ, ಕಾಲೋನಿ ನಿವಾಸಿಗಳು ಈಗಾಗಲೇ ಗ್ರಾ.ಪಂ.ಗೆ ಮನವಿ ಪತ್ರ ಸಲ್ಲಿಸಿ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ, ಅಬಕಾರಿ ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡದಂತೆ ಜನರ ಪರವಾಗಿ ಪತ್ರ ಸಲ್ಲಿಸಲಾಗಿದೆ. ಗ್ರಾ. ಪಂ. ಜನರ ಪರವಾಗಿ ನಿಲ್ಲುತ್ತದೆ. ಜನರ ವಿರೋಧ ಇಲ್ಲದ ಯಾವದೇ ಜಾಗದಲ್ಲಿ ಮದ್ಯದಂಗಡಿ ತೆರೆಯಲು ಆಕ್ಷೇಪಣೆ ಮಾಡುವದಿಲ್ಲವೆಂದು ತಿಳಿಸಿದರು .
(ಮೊದಲ ಪುಟದಿಂದ) ನಕ್ಸಲ್ ಧಾಳಿಯ ಭಯದಿಂದ ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿದ್ದ ರಾಜ್ಯ ಪೊಲೀಸ್ ಚೆಕ್ ಪೋಸ್ಟನ್ನು ಒಂದು ಕಿ.ಮೀ. ಹಿಂದಕ್ಕೆ ಸರಿಸಿ ಕುಟ್ಟ ಪೊಲೀಸ್ ಠಾಣೆಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಆದರೆ ಮದ್ಯದಂಗಡಿಯನ್ನು ಚೆಕ್ ಪೋಸ್ಟ್ ದಾಟಿ ನಿರ್ಮಿಸಲಾಗುತ್ತಿದೆ. ಕೇರಳದಿಂದ ಅಪರಿಚಿತರು ಮದ್ಯ ಸೇವನೆ ಮಾಡಿ ಅಹಿತಕರ ಘಟನೆ ನಡೆಸಿ ತೆರೆಳುವ ಸಂದರ್ಭ ಯಾವದೇ ಚೆಕ್ ಪೋಸ್ಟ್‍ಗಳು ಇಲ್ಲ ಎಂದು ಆಂತಕ ವ್ಯಕ್ತಪಡಿಸಿದರು .
ಮದ್ಯದಂಗಡಿ ಮಾಲೀಕ ತಬ್ಬಂಗಡ ಚಾಮಿ ಅವರು ಪ್ರತಿಭಟನಾಕಾರರಿU ಸಮಜಾಯಿಸಿಕೆ ನೀಡಿ, ಈಗಾಗಲೇ ಮದ್ಯದಂಗಡಿ ಕಟ್ಟಡ ಹಾಗೂ ಇತರ ವ್ಯವಹಾರಕ್ಕಾಗಿ ರೂ. 20 ಲಕ್ಷ ಖರ್ಚಾಗಿದೆ. ಎಲ್ಲಾ ಕೆಲಸವಾದ ಮೇಲೆ ವಿರೋಧ ಮಾಡುವದು ಸರಿ ಅಲ್ಲ. ಸರ್ಕಾರದ ನಿಯಮದಂತೆ ಮದ್ಯದಂಗಡಿ ತೆರೆಯುತ್ತಿದ್ದು, ಇದರಿಂದ ಸ್ಥಳಿಯ ನಿವಾಸಿಗಳಿಗೆ ಯಾವದೇ ತೊಂದರೆ ಆಗದಂತೆ ಮತ್ತು ಮದ್ಯದಂಗಡಿಗೆ ಬರುವವರಿಂದ ಯಾವದೇ ಅಹಿತಕರ ಘಟನೆಗೆ ಅಸ್ಪದವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಂಡು ಬೀದಿದೀಪ ಅಳವಡಿಸಲಾಗುವದು. ಸಮೀಪದಲ್ಲೇ ಪೋಲಿಸ್ ಠಾಣೆ ಇರುವದರಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವದಿಲ್ಲ ಎಂದು ಭರವಸೆ ನೀಡಿದರು. ಆದರೆ ಇದಕ್ಕೆ ಪ್ರತಿಭಟನೆಗಾರರು ಸಹಮತ ವ್ಯಕ್ತಪಡಿಸದೆ ಪ್ರತಿಭಟನೆ ಮುಂದುವರೆಸಿದರು.
ಕುಟ್ಟ ವೃತ್ತ ನೀರಿಕ್ಷಕ ಸಿ.ಎನ್. ದಿವಾಕರ್, ಉಪನೀರಿಕ್ಷಕ (ಪ್ರಬಾರ) ಡಿ.ಕುಮಾರ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರಾದ ಅಯ್ಯಪ್ಪ, ಅರುಣ್‍ಕುಮಾರ್, ಸುನೀತಾ, ಮೈಮುನ್ನಿಸ, ಮಾಜಿ ಅಧ್ಯಕ್ಷೆ ಬಿಂದು, ಮಾಜಿ ಉಪಾಧ್ಯಕ್ಷೆ ಚಿಕ್ಕಿ, ಮಾಜಿ ಸದಸ್ಯರುಗಳಾದ ಜೆ.ಯಂ. ರಾಜ, ಪಿ.ಸಿ. ಸುಬ್ಬ ಮತ್ತಿತರರು ಭಾಗವಹಿಸಿದ್ದರು.