ಸೋಮವಾರಪೇಟೆ, ಅ.19: ಕಳೆದ 6 ವಾರಗಳ ಹಿಂದೆ ಈ ಯುವಕನ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಗಾಂಜಾ ವ್ಯಸನಕ್ಕೆ ತನಗರಿವಿಲ್ಲದಂತೆ ಬಲಿಯಾಗಿ ಮನೆಯವರೂ ಸೇರಿದಂತೆ ಸಮಾಜದ ನೆಮ್ಮದಿ ಕೆಡಿಸುತ್ತಿದ್ದ ಬಗ್ಗೆ ಪೊಲೀಸ್ ಠಾಣೆಗೂ ಅನೇಕ ದೂರುಗಳು ಬರುತ್ತಿತ್ತು. ಇನ್ನು ಕೆಲವರು ಈತನ ಛಾಳಿಯಿಂದ ಬೇಸತ್ತು ಹಿಗ್ಗಾಮುಗ್ಗಾ ಹೊಡೆದು ಆಕ್ರೋಶ ತೀರಿಸಿಕೊಳ್ಳುತ್ತಿದ್ದರು. ವ್ಯಸನಕ್ಕೆ ಬಲಿಯಾಗಿ ತಾತ್ಸಾರಕ್ಕೆ ಒಳಗಾಗಿದ್ದ ಯುವಕ ಇದೀಗ ಚಿಕಿತ್ಸೆಯ ಬಳಿಕ ಮನೆಗೆ ಆಗಮಿಸಿದ್ದು, ‘ಮರುಜನ್ಮ ಸಿಕ್ಕಿದೆ; ಕೆಲಸಕ್ಕೆ ಹೋಗಿ ಅಮ್ಮನನ್ನು ಚೆನ್ನಾಗಿ ನೋಡ್ಕೋತೀನಿ’ ಎಂದು ಹೇಳಿಕೆ ನೀಡಿದ್ದಾನೆ.
ಇದು ಜನತಾಕಾಲೋನಿ ನಿವಾಸಿ ಲೂಸಿ ಡಿಸೋಜ ಪುತ್ರ, ಕಿರಣ್ ಡಿಸೋಜನ ಕಥೆ. ಸ್ನೇಹಿತರೊಂದಿಗೆ ಸೇರಿ ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ. ಪರಿಣಾಮ ಕೆಲಸ ಬಿಟ್ಟು ಪಟ್ಟಣ ಸುತ್ತ ಲಾರಂಭಿಸಿದ. 7 ವರ್ಷಗಳ ವ್ಯಸನ ದಿಂದಾಗಿ ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡಿದ್ದ. ಈತನ ತಾಯಿ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಆಸ್ಪತ್ರೆಯಿಂದ ಎಸ್ಕೇಪ್ ಆಗುತ್ತಿದ್ದ.
ಕರ್ನಾಟಕ ರಕ್ಷಣಾ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್ ಅವರು ವಿಶೇಷ ಆಸಕ್ತಿ ವಹಿಸಿ, ಕಿರಣ್ನ ತಾಯಿಯೊಂದಿಗೆ ಮಾತುಕತೆ ನಡೆಸಿ ಚಿಕಿತ್ಸೆಗೆ ಸಹಕರಿಸುವ ಬಗ್ಗೆ ವಿವರಿಸಿದರು.
ಅದರಂತೆ ಕಳೆದ ತಾ. 2.09.2017ರಂದು ಕಿರಣ್ನನ್ನು ಸೋಮವಾರಪೇಟೆ ಪೊಲೀಸ್ ಠಾಣೆಗೆ ಕರೆತಂದು, ಠಾಣಾಧಿಕಾರಿಗಳ ಅನುಮತಿ ಮೇರೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಮಾನಸಿಕ ತಜ್ಞ ರೂಪೇಶ್ ಅವರಲ್ಲಿ ಸಮಾಲೋಚನೆ ನಡೆಸಿದರು. ಹೆಚ್ಚಿನ ಚಿಕಿತ್ಸೆಗಾಗಿ ರೂಪೇಶ್ ಅವರ ಶಿಫಾರಸ್ಸಿನ ಮೇರೆ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದೊಯ್ದರು.
ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಕಿರಣ್ ಅಲ್ಲಿಂದಲೂ ಒಮ್ಮೆ ಎಸ್ಕೇಪ್ ಆಗಿ ಮನೆ ಸೇರಿದ್ದ. ಆದರೂ ಛಲಬಿಡದ ಮಂಜುನಾಥ್ ಅವರು, ಮತ್ತೆ ಆತನನ್ನು ಬೆಂಗಳೂರಿಗೆ ಕರೆ ದೊಯ್ದರು. ಇದೀಗ ಕಿರಣ್ ಸಂಪೂರ್ಣ ಗುಣಮುಖನಾಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಮನೆಗೆ ವಾಪಸ್ ಬಂದಿದ್ದಾನೆ. ಕಿರಣ್ ಕರವೇ ಪದಾಧಿಕಾರಿಗಳೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿ, ಮರುಜನ್ಮ ನೀಡಿದ್ದಕ್ಕೆ ಋಣಿಯಾಗಿದ್ದು, ಮುಂದೆಂದೂ ಕೆಟ್ಟ ಸಹವಾಸ ಮಾಡುವದಿಲ್ಲ. ಕೆಲಸಕ್ಕೆ ಹೋಗಿ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳುತ್ತೇನೆ ಎಂದು ತಾಯಿಯ ಕೈಹಿಡಿದು ಪ್ರತಿಜ್ಞೆ ಮಾಡಿದ್ದಾನೆ.
ಗೋಷ್ಠಿಯಲ್ಲಿದ್ದ ಕಿರಣ್ನ ತಾಯಿ ಮಾತನಾಡಿ, ಮಗ ಮೊದಲಿನಂತಾಗಲು ರಕ್ಷಣಾ ವೇದಿಕೆಯವರೇ ಕಾರಣ ಎಂದು ಕಣ್ಣೀರಿನೊಂದಿಗೆ ಕೃತಜ್ಞತೆ ಸಲ್ಲಿಸಿದರು.
ಗೋಷ್ಠಿಯಲ್ಲಿದ್ದ ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ತಾಯಿಯ ಕಷ್ಟ ನೋಡಲಾಗದೇ ಕಿರಣ್ಗೆ ಚಿಕಿತ್ಸೆ ಕೊಡಿಸಲು ಮುಂದಾದೆವು. ವೇದಿಕೆಯ ತಾಲೂಕು ಅಧ್ಯಕ್ಷ ದೀಪಕ್, ನಗರ ಕಾರ್ಯದರ್ಶಿ ರವೀಶ್, ಉಪಾಧ್ಯಕ್ಷ ಸಂತೋಷ್, ಪದಾಧಿಕಾರಿಗಳಾದ ಬೇಟು, ಅಬ್ಬಾಸ್ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳೂ ಸಹ ಈತನ ಬಗ್ಗೆ ಜವಾಬ್ದಾರಿ ವಹಿಸಿಕೊಂಡು ಚಿಕಿತ್ಸೆ ಕೊಡಿಸಲು ಮುಂದಾದೆವು ಎಂದರು.- ವಿಜಯ್