*ಗೋಣಿಕೊಪ್ಪಲು, ಅ. 19: ತಾಲೂಕಿನಲ್ಲಿ ಅಂಗನವಾಡಿ ಕೇಂದ್ರ ಗಳಿಂದ ಗರ್ಭಿಣಿ ಹಾಗೂ ಬಾಣಂತಿ ಯರಿಗೆ ನೀಡುವ ಬಿಸಿಯೂಟ ಮಾತೃಪೂರ್ಣ ಯೋಜನೆ ಅಪೂರ್ಣವಾಗಿದೆ.

ಅಂಗನವಾಡಿ ಕೇಂದ್ರಗಳಿಗೆ ಬಿಸಿಯೂಟ ವಿತರಣೆಗೆ ಬೇಕಾದ ಸೌಕರ್ಯಗಳು ಬರುತ್ತಿಲ್ಲ. ಅಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಗರ್ಭಿಣಿ ಹಾಗೂ ಬಾಣಂತಿಯರು ಬರಲು ಸಂಕೋಚ ವ್ಯಕ್ತಪಡಿಸುತ್ತಾರೆ. ಹೀಗಾಗಿ ಯೋಜನೆ ಅಪೂರ್ಣವಾಗಿದೆ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಹೇಳಿದರು.

ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು.

ಸರ್ಕಾರದ ಮಾತೃಪೂರ್ಣ ಯೋಜನೆಗೆ ಗರ್ಭಿಣಿ ಹಾಗೂ ಬಾಣಂತಿಯರು ಸ್ಪಂದಿಸುತ್ತಿಲ್ಲ. ಜಿಲ್ಲೆ ಯಲ್ಲಿ ಬಾಣಂತಿಯರು ಸುಮಾರು 3 ತಿಂಗಳು ವಿಶ್ರಾಂತಿಯಲ್ಲಿರುವದ ರಿಂದ ಮನೆಯಿಂದ ಹೊರ ಹೋಗಲು ಇಚ್ಚಿಸುವದಿಲ್ಲ. ಹೀಗಾಗಿ ಅಂಗನವಾಡಿಯಲ್ಲಿ ನೀಡುವ ಬಿಸಿಯೂಟ ಯೋಜನೆ ಅಪೂರ್ಣ ಅಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಗರ್ಭಿಣಿ ಹಾಗೂ ಬಾಣಂತಿಯರು ತೆರಳಿದಾಗ ಬಿಸಿಯೂಟ ತಣ್ಣ ಗಾಗಿರುವದರಿಂದ ಊಟ ಮಾಡಲು ಸಾಧ್ಯವಾಗುವದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಸಿಬ್ಬಂದಿ ಕೊರತೆ, ಪಾತ್ರೆ ಹಾಗೂ ಇನ್ನಿತರ ಆಹಾರ ಪದಾರ್ಥಗಳ ಕೊರತೆಯಿಂದ ಅಡುಗೆ ತಯಾರಿಸಲು ಸಹ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಹಿನ್ನೆಲೆ ಮಾತೃಪೂರ್ಣ ಯೋಜನೆಯನ್ನು ಸರಕಾರ ಜಿಲ್ಲೆಯಲ್ಲಿ ಸ್ಥಗಿತಗೊಳಿಸುವದು ಉತ್ತಮ ಎಂದು ಹೇಳಿದರು.

ತಾಲೂಕಿನ ಬಹುತೇಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದಾಖಲೆ ಇಲ್ಲ. ಹಿರಿಯರು ದಾನ ಮಾಡಿದ ಜಾಗ ಇಂದಿಗೂ ಅದೇ ಹೆಸರಿನಲ್ಲಿದೆ. ಇದನ್ನು ಸರ್ಕಾರದ ಆಸ್ತಿಯಾಗಿ ಪರಿಗಣಿಸಲು ಸೂಕ್ತ ಕ್ರಮ ಕೈಗೊಂಡು ಶೀಘ್ರದಲ್ಲೆ ಶಾಲೆಗಳ ದಾಖಲೆ ಆಯಾ ಶಾಲೆ ಹೆಸರಿನಲ್ಲಿ ನಮೂದಾಗಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿನ ಶಿಶು ಮರಣ ತಪ್ಪಿಸಲು ಕ್ರಮ ಕೈಗೊಳ್ಳಲು ಹಾಡಿ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ ಆರೋಗ್ಯ ಕೇಂದ್ರಗಳಿಂದ ಕ್ಯಾಂಪ್ ನಡೆಸಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ರೂಪಿಸಿರುವದಾಗಿ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಸಭೆಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯಿಂದ ಬುಡಕಟ್ಟು ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಇವರಿಗೆ ಮೂಲಭೂತ ಸೌಕರ್ಯ ನೀಡಲು ಅವಕಾಶ ನೀಡಬೇಕೆಂದು ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಸೂಚಿಸಿದರು.

ಈ ಸಂದರ್ಭ ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನೆ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಷಡ್ನೇಕರ್, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಗೃತಿ ಕಾರ್ಯಕ್ರಮ

ಸೋಮವಾರಪೇಟೆ : ಪಟ್ಟಣ ಹಾಗೂ ಹೊರ ವಲಯದಲ್ಲಿನ ಅಂಗನವಾಡಿ ಕೇಂದ್ರಗಳು ಇಲ್ಲಿನ ವೆಂಕಟೇಶ್ವರ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಯರಿಗೆ ಸಾಮೂಹಿಕವಾಗಿ ಉಣ ಬಡಿಸುವ ಮೂಲಕ ಮಾತೃಪೂರ್ಣ ಯೋಜನೆಗೆ ಚಾಲನೆ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಫಲಾನುಭವಿಗಳಿಗೆ ದೊರಕುವ ಸವಲತ್ತು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಅಡುಗೆ ತಯಾರಿ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಬ್ಲಾಕ್ ಕೇಂದ್ರದ ಕಾರ್ಯಕರ್ತೆ ಜೆನ್ನಿಪರ್ ತಾರಾ ಲೋಬೋ, ಮಹದೇಶ್ವರ ಬ್ಲಾಕ್ ಕೇಂದ್ರದ ಎನ್.ಜಿ. ಉಷಾ, ಪೌರಕಾರ್ಮಿಕ ಕಾಲೋನಿ ಕೇಂದ್ರದ ಎ. ಎಂ. ಇಂದ್ರಾಣಿ, ಬಸವೇಶ್ವರ ರಸ್ತೆಯ ಜಗದಾಂಭ, ಜನತಾ ಕಾಲೋನಿ ಕೇಂದ್ರದ ಅಶ್ವಿನಿ, ಚೌಡ್ಲು 1 ಹಾಗೂ 2 ಕೇಂದ್ರಗಳ ಕುಸುಮಾವತಿ, ವನಜಾಕ್ಷಿ, ಮಸಗೋಡು ಕೇಂದ್ರದ ಎಂ.ಸಿ. ಉಷಾ, ತಣ್ಣೀರುಹಳ್ಳ ಕೇಂದ್ರದ ಕುಸುಮಾವತಿ ಹಾಗೂ ಸಹಾಯಕಿ ಯರು ಪಾಲ್ಗೊಂಡಿದ್ದರು.