*ಗೋಣಿಕೊಪ್ಪಲು, ಅ. 20: ಸಿದ್ದರಾಮಯ್ಯ ನಿದ್ರೆ ಮಾಡಿದ್ದನ್ನು ಬಿಟ್ಟರೆ ಈ ರಾಜ್ಯಕ್ಕೆ ಅವರ ಕೊಡುಗೆ ಶೂನ್ಯ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು. ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ತಿತಿಮತಿ ಸ್ಥಾನೀಯ ಸಮಿತಿ ಅಧ್ಯಕ್ಷ ಅನೂಪ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕೊಡಗಿಗೆ ಚತುಷ್ಪಥ ರಸ್ತೆ: ಕೊಡಗಿನ ಮೂಲಕ ಕೇರಳಕ್ಕೆ ತಲುಪಲು 154 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕುಶಾನಗರದವರೆಗೂ ರೈಲು ಮಾರ್ಗವಾಗಲಿದೆ. ಆದರೆ ಇದಕ್ಕೆ ಭೂಮಿ ದೊರಕಿಸಿಕೊಡುವದಕ್ಕೆ ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ ಎಂದು ದೂರಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಬರಲು ಹಿಂದಿನ ಕೇಂದ್ರ ಸರ್ಕಾರವೇ ಕಾರಣ. ಮನಮೋಹನ್ ಸಿಂಗ್ ಪ್ರಧಾನಿ ಮಂತ್ರಿಯಾಗಿದ್ದಾಗಲೇ ರೂಪಿತವಾದ ಯೋಜನೆಗಳು ಇವು. ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ಇದನ್ನು ತಡೆಗಟ್ಟಬಹುದಿತ್ತು ಎಂದು ಹೇಳಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಶೂಲದಲ್ಲಿ ಮುಳುಗಿಸಿದ್ದಾರೆ. ಈಗಾಗಲೇ ರೂ. 2 ಲಕ್ಷದ 78 ಕೋಟಿ ಸಾಲ ಮಾಡಿದ್ದಾರೆ ಎಂದು ದೂರಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ವ್ಯಾಪಾರೋದ್ಯಮದ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಗಣಪತಿ, ಆರ್‍ಎಂಸಿ ಅಧ್ಯಕ್ಷ ಸುವಿನ್ ಗಣಪತಿ, ಸದಸ್ಯ ಮೋಹನ್‍ರಾಜ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಹೆಚ್. ದೇವಯ್ಯ, ವಿ.ಎಸ್.ಎಸ್.ಎನ್. ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಮೊದಲಾದವರು ಇದ್ದರು.