ಮಡಿಕೇರಿ, ಅ. 20: ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಕರ್ನಾಟಕ ಸರಕಾರದ ವತಿಯಿಂದ ಕೈಗೊಂಡಿರುವ ಮಾತೃಪೂರ್ಣ ಯೋಜನೆಗೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ ಚಾಲನೆ ನೀಡಿದರು.
ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಯಿತು. ಈ ಸಂದರ್ಭ ಪಂಚಾಯಿತಿ ಸದಸ್ಯ ಪ್ರೇಮ್‍ಕುಮಾರ್, ಅಂಗನವಾಡಿ ಶಿಕ್ಷಕಿ ಜಯಂತಿ ಮತ್ತು ಶಾಲಾ ಮುಖ್ಯ ಶಿಕ್ಷಕರು ಮತ್ತು ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರು ಉಪಸ್ಥಿತರಿದ್ದರು.
ನಲ್ವತ್ತೊಕ್ಲು: ಬಿಳುಗುಂದ ಗ್ರಾಮದ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಆರು ಅಂಗನವಾಡಿ ಕೇಂದ್ರಗಳು ಸೇರಿ ನಲ್ವತ್ತೊಕ್ಲು ಗ್ರಾಮದ ಮೊದಲನೆಯ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಹಾಗೂ ಪಂಚಾಯಿತಿ ಸದಸ್ಯ ಪಿ.ಎ. ಹನೀಫ್ ಅವರ ಸಮ್ಮುಖದಲ್ಲಿ ಮಾತೃಪೂರ್ಣ ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎ. ಹನೀಫ್ ಹುಟ್ಟುವ ಪ್ರತಿ ಮಗು ದೇಶದ ಆಸ್ತಿ. ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಪೌಷ್ಟಿಕತೆಯ ಕೊರತೆಯಿಂದ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಜಿಲ್ಲೆಯ ಕೆಲವೊಂದು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ದೂರ ಮನೆಗಳನ್ನು ಹೊಂದಿರತಕ್ಕಂತಹ ಬಡ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕಾಡಾನೆಗಳ ಹಾಗೂ ಮತ್ತಿತರ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಅಂಗನವಾಡಿ ಕೇಂದ್ರಕ್ಕೆ ಬಂದು ಸರಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಸ್ವಲ್ಪಮಟ್ಟಿಗೆ ಕಷ್ಟಕರವಾದರೂ ಕೂಡ ಎಲ್ಲರೂ ಸಹಕರಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯ ರಾದ ರಮ್ಯ, ಸಾಕೀರ, ರಾಮ್‍ಕಮಲ, ಜುಹೇನ, ರಾಣಿ, ಸುನಿತ ಹಾಗೂ ಸಹಾಯಕಿಯರು, ಆಶಾ ಕಾರ್ಯಕರ್ತೆ ಅಸ್ಮ, ಬಾಲವಿಕಾಸ ಸಮಿತಿಯ ಗೀತಾ ಮತ್ತು ಜಮೀಲ ಹಾಗೂ ಬಾಣಂತಿಯರು, ಗರ್ಭಿಣಿಯರು, ಸಾರ್ವಜನಿಕರು ಹಾಜರಿದ್ದರು.