ಆಲೂರುಸಿದ್ದಾಪುರ, ಅ. 20: ಸಾಧಕರು ತನ್ನ ವ್ಯಕ್ತಿತ್ವ ಹಾಗೂ ಕೌಶಲ್ಯ ಬೆಳವಣಿಗೆಯಿಂದ ಸಾಧಕರಾಗಿದ್ದಾರೆ’ ಎಂದು ಆಲೂರುಸಿದ್ದಾಪುರ ಸಾಯಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹೊಸೂರು ಕೆ. ಶಿವಪ್ರಕಾಶ್ ಅಭಿಪ್ರಾಯಪಟ್ಟರು. ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಆಲೂರುಸಿದ್ದಾಪುರ ಸರಕಾರಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರದಲ್ಲಿ ವ್ಯಕ್ತಿತ್ವ ವಿಕಾಸ ಹಾಗೂ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ನಮ್ಮ ದೇಶದಲ್ಲಿ ಹಾಗೂ ಸಮಾಜದಲ್ಲಿರುವ ಸಾಧಕರೆಲ್ಲರೂ ತನ್ನ ಶಿಕ್ಷಣ ಹಾಗೂ ಬುದ್ದಿವಂತಿಕೆಯಿಂದ ಸಾಧಕರಾಗಿಲ್ಲ, ಅವರೆಲ್ಲರೂ ತನ್ನ ವ್ಯಕ್ತಿತ್ವ ಹಾಗೂ ಕೌಶಲ್ಯ ಶಕ್ತಿಯಿಂದ ಸಾಧಕರಾಗಿದ್ದಾರೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧಕರ ವ್ಯಕ್ತಿತ್ವವನ್ನು ಮಾದರಿಯನ್ನಾಗಿ ಮಾಡಿಕೊಂಡು ಅವುಗಳನ್ನು ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಈ ಮೂಲಕ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸಹ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಗೋಣಿಮರೂರು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ವೀರಪ್ಪ ಮಡಿವಾಳರ್ ಮಾತನಾಡಿ-ರಾಷ್ಟ್ರೀಯ ಸೇವಾ ಯೋಜನೆಯ ಘಟಕದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವದರಿಂದ ವಿದ್ಯಾರ್ಥಿಗಳಲ್ಲಿ ಸಮಾಜದ ಬಗ್ಗೆ ಕಳಕಳಿಯ ಮನೋಭಾವನೆ ಬೆಳೆಯುತ್ತದೆ, ಸಮಾಜ ಸುಧಾರಣೆ, ನಾಯಕತ್ವ ಬೆಳವಣಿಗೆಗೆ ರಾಷ್ಟ್ರೀಯ ಸೇವಾ ಯೋಜನೆ ಪೂರಕವಾದ ವೇದಿಕೆಯಾಗುತ್ತದೆ ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಶಿಬಿರದ ಲಾಭವನ್ನು ಸದುಪಯೋಗಿಸಿಕೊಂಡು ಇವುಗಳ ಮೌಲ್ಯವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಗೋಣಿಮರೂರು ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಕೆ.ಜಿ.ಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸಿದ್ದಲಿಂಗಪ್ಪ, ಶಿಬಿರಾಧಿಕಾರಿ ಶಿವಕುಮಾರ್ ಮುಂತಾದವರು ಇದ್ದರು.