ಶ್ರೀಮಂಗಲ, ಅ. 19: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂ. 25 ಲಕ್ಷ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂಬ ಸುದ್ದಿಯಿಂದ ಸ್ಥಳೀಯ ಸಾರ್ವಜನಿಕರು ಮತ್ತು ಪೊಲೀಸರಲ್ಲಿ ಆತಂಕ ಸೃಷ್ಟಿಸಿತು.
ಶ್ರೀಮಂಗಲ ಪಟ್ಟಣದಲ್ಲಿ ದಿನಸಿ ಅಂಗಡಿ ವ್ಯಾಪಾರ ನಡೆಸುತ್ತಿರುವ ರವಿ ಎಂಬವರು ತಮ್ಮನ್ನು ಅಪಹರಿಸ ಲಾಗಿದೆ ಎಂದು ಆತಂಕ ಭರಿತ ಧ್ವನಿಯಲ್ಲಿ ಹಲವರಿಗೆ ಕರೆ ಮಾಡಿ ತಿಳಿಸಿದ್ದ. ತಾನು ಕುಟ್ಟದಿಂದ ರೂ. 25 ಲಕ್ಷ ನಗದು ತರುತ್ತಿರುವಾಗ ಅಪಹರಿಸಲಾಗಿದ್ದು, ತನಗೆ ಚಾಕು ಹಾಕಿದ್ದಾರೆ. ರಕ್ತಸ್ರಾವವಾಗುತ್ತಿದ್ದು, ನನ್ನನ್ನು ಜಾಗ ಗುರುತಿಸಲು ಸಾಧ್ಯವಾಗದ ಕಾಫಿ ತೋಟದಲ್ಲಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಾನು ಬದುಕುವದಿಲ್ಲ, ನನ್ನ ಪತ್ನಿ ಹಾಗೂ ಮಕ್ಕಳನ್ನು ನೋಡಿಕೊಳ್ಳುವಂತೆ ವಕೀಲರೊಬ್ಬರಿಗೆ ಸೇರಿದಂತೆ ತನಗೆ ಆಪ್ತರಾಗಿರುವ ಹಲವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಇದರಿಂದ ಸಹಜವಾಗಿಯೇ ಆತಂಕದಿಂದ ರವಿಯಿಂದ ರಕ್ಷಣೆಯ ಮೊರೆಯ ಕರೆ ಸ್ವೀಕರಿಸಿದ ಹಲವರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಈತನ ಫೋನ್ ಮೊಬೈಲ್ ಟವರ್ ಲೋಕೇಶನ್ ಮೂಲಕ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಸಂದರ್ಭ ಪೊಲೀಸರೊಂದಿಗೆ ಸ್ಥಳೀಯ ಸಾರ್ವಜನಿಕರು, ಗ್ರಾಮಸ್ಥರು ಹುಡುಕಾಟ ನಡೆಸಿದರು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರ ವರೆಗೆ ಹುಡುಕಾಟ ನಡೆಸಿದ ಸಂದರ್ಭ ಶ್ರೀಮಂಗಲ ಸಮೀಪ ಕುರ್ಚಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕೊರಳಿಗೆ ಹಗ್ಗ ಹಾಕಿಕೊಂಡು ಹಗ್ಗವನ್ನು ಕಾಫಿ ಮರಕ್ಕೆ ಕಟ್ಟಿಕೊಂಡು ಅರೆಬೆತ್ತಲೆಯಾಗಿ ರವಿ ಗೋಚರಿಸಿದ್ದಾನೆ.
ಈ ಸಂದರ್ಭ ಪೊಲೀಸರು ಶ್ರೀಮಂಗಲ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ತನಗೆ ಶ್ರೀಮಂಗಲ ಕೆಇಬಿ ಸಮೀಪ ಪೈಸಾರಿ ಜಾಗ ಕಾಡು ಕಡಿಯುವ ಸಂದರ್ಭ ಹಲವರಿಂದ ಕಿರುಕುಳವಿದೆ. ತನ್ನನ್ನು ಯಾರು ಅಪಹರಿಸಿಲ್ಲ ಎಂದು ತಿಳಿಸಿದ್ದಾನೆ. ಅಲ್ಲದೆ ಅಪಹರಣದ ನಾಟಕ ಮಾಡಿದ ರವಿ ತೀವ್ರವಾಗಿ ಮದ್ಯ ಸೇವಿಸಿದ್ದು ಕಂಡುಬಂದಿದೆ. ಮಾತ್ರವಲ್ಲದೆ ಪೊಲೀಸರು ಕಾಫಿ ತೋಟದ ಮಧ್ಯೆ ರವಿ ಇದ್ದ ಸ್ಥಳದಲ್ಲಿಯೂ ಹಲವು ಬಿಯರ್ ಬಾಟಲ್ ಹಾಗೂ ಮದ್ಯ ಸೇವಿಸಿ ಬಾಟಲ್ ಇರಿಸಿದ್ದನ್ನು ವಶಪಡಿಸಿ ಕೊಂಡಿದ್ದಾರೆ.
ರವಿಯು ಶ್ರೀಮಂಗಲದಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಿದ್ದು, ಎರಡು ದಿನದ ಹಿಂದೆ ಸ್ಥಳೀಯರಿಂದ ಹಣ ಸಾಲ ಬೇಕೆಂದು ಕೇಳುತ್ತಿದ್ದ. ಸ್ಥಳೀಯ ಉದ್ಯಮಿ ಅವರಲ್ಲಿ ಮುಂದಿನ ಫೆಬ್ರವರಿಯಲ್ಲಿ ಕಾಫಿಗೆ 4000 ದಂತೆ ನೀಡುತ್ತೇನೆ, 6 ಲಕ್ಷ ಸಾಲ ಬೇಕೆಂದು ಕೇಳಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ ಹಲವರಿಂದ ಈತ ಸಾಲ ಪಡೆದಿದ್ದು, ಈ ದಿನ ವಾಪಸ್ ನೀಡಬೇಕಾಗಿತ್ತು ಎಂದು ಗೊತ್ತಾಗಿದೆ.
ರವಿಯು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಅಪಹರಣದ ಬಗ್ಗೆ ದೂರು ನೀಡಿಲ್ಲ. ಅಪಹರಣವಾಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಪ್ರತಿ ದೂರು: ಶ್ರೀಮಂಗಲದ ಕೆಲವರು ಅಪಹರಣ ಮಾಡಿ ಹಣ ದರೋಡೆ ಮಾಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ ರವಿ ಅವರ ಮೇಲೆ ತಮ್ಮ ಹೆಸರಿಗೆ ಕಳಂಕ ಹಾಗೂ ಸಮಾಜದಲ್ಲಿ ಗೌರವಕ್ಕೆ ಚ್ಯುತಿ ತಂದಿದ್ದಾನೆ. ಮಾತ್ರವಲ್ಲದೇ ಪೊಲೀಸರಿಗೂ ಅನಗತ್ಯ ತೊಂದರೆ ನೀಡಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀಮಂಗಲದ ಮುತ್ತಣ್ಣ, ಕಾಳಯ್ಯ ಹಾಗೂ ಜಯ ದೂರು ನೀಡಿದ್ದಾರೆ. ಸಂಜೆ ವೇಳೆಗೆ ಅಪಹರಣದ ಬಗ್ಗೆ ಸುದ್ದಿ ಹರಡಿದ ಸಂದರ್ಭ ನೂರಾರು ಸ್ಥಳೀಯರು ಠಾಣೆಗೆ ಆಗಮಿಸಿ ಅಪಹರಣದ ಪ್ರಹಸನದ ಬಗ್ಗೆ ಕಿಡಿಕಾರಿದರು. ಕಾರ್ಯಾ ಚರಣೆಯಲ್ಲಿ ಕುಟ್ಟ ವೃತ್ತ ನಿರೀಕ್ಷಕ ದಿವಾಕರ್, ಶ್ರೀಮಂಗಲ ಎಎಸ್‍ಐ ಜಗದೀಶ್ ಅಲ್ಲದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಅಜ್ಜಮಾಡ ಚಂಗಪ್ಪ, ಕಾಳಿಮಾಡ ಪ್ರಶಾಂತ್ ಇದ್ದರು.