ಮಡಿಕೇರಿ, ಅ. 20: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನವೆಂಬರ್ 4 ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊಂಡ “ಸಾಂತ್ವನ ಮಹಿಳಾ ಸಹಾಯವಾಣಿ” ಜಿಲ್ಲೆಯಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ 3029 ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, 2989 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 2017-18ನೇ ಆರ್ಥಿಕ ಸಾಲಿನಲ್ಲಿ ಒಟ್ಟು 153 ಪ್ರಕರಣಗಳು ದಾಖಲಾಗಿ 113 ಪ್ರಕರಣಗಳು ಇತ್ಯರ್ಥಗೊಂಡು ಉಳಿದ 40 ಪ್ರಕರಣಗಳು ಇತ್ಯರ್ಥದ ಹಂತದಲ್ಲಿರುತ್ತದೆ.
ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ. 4 ಲಕ್ಷಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ 9 ಫಲಾನುಭವಿಗಳಿಗೆ 2017-18ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ.
ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಾಂತ್ವನ ಕೇಂದ್ರದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 1091 (ಕೊಡಗಿನೊಳಗಿಂದ ಬಿ.ಎಸ್.ಎನ್.ಎಲ್. ಸ್ಥಿರ ದೂರವಾಣಿ ಉಚಿತ ಕರೆ), 08272-229004 ನ್ನು ಸಂಪರ್ಕಿಸಬಹುದು.