ಕರಿಕೆ, ಅ. 19: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಒಂಬತ್ತನೆಯ ಸಮ್ಮೇಳನದ ಪೂರ್ವಭಾವಿ ಸಭೆಯು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ಕರಿಕೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನವೆÀಂಬರ್ 28ರಂದು ಮಡಿಕೇರಿ ತಾಲೂಕಿನ ಸಾಹಿತ್ಯ ಪರಿಷತ್ತಿನ ಒಂಬತ್ತನೇ ಸಮ್ಮೇಳನವನ್ನು ಕರಿಕೆ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಲೋಕೇಶ್ ಸಾಗರ್ ಗಡಿ ಭಾಗದ ಕರಿಕೆಯಲ್ಲಿ ಕನ್ನಡಭಿಮಾನಿಗಳು ಹಾಗೂ ಗ್ರಾಮೀಣ ಪ್ರತಿಭೆಗಳು ಸಾಕಷ್ಟು ಮಂದಿ ಇದ್ದು, ಅವರ ಪ್ರತಿಭೆ ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದರು. ಸಮ್ಮೇಳನದಲ್ಲಿ ಒಂದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಊಟ, ತಿಂಡಿಯ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು. ಆರ್ಥಿಕ, ಆಹಾರ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಗ್ರಾಮಸ್ಥರು ಹಲವು ಸಲಹೆ, ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದಯಾನಂದ, ಜಿ.ಪಂ. ಸದಸ್ಯೆ ಕವಿತಾಪ್ರಭಾಕರ್, ತಾ.ಪಂ. ಸದಸ್ಯೆ ಸಂಧ್ಯ, ಗ್ರಾ.ಪಂ. ಉಪಾಧ್ಯಕ್ಷೆ ಸೋಲಿ ಜಾರ್ಜ್, ಸದಸ್ಯರಾದ ಹರಿಪ್ರಸಾದ, ಪುರುಷೋತ್ತಮ, ಜಯಂತಿ, ಬಾಲಕೃಷ್ಣ, ಪ್ರಮುಖರಾದ ಜಯರಾಮ್ ಗೌಡ, ಹೊಸಮನೆ ಹರೀಶ್, ಪೊನ್ನಪ್ಪ ಸೇರಿದಂತೆ, ಇಲಾಖೆಯವರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಬೇಕಲ್ ರಮನಾಥ ಸ್ವಾಗತಿಸಿ, ಪಿಡಿಒ ಬಿಪಿನ್ ವಂದಿಸಿದರು