ಗೋಣಿಕೊಪ್ಪಲು, ಅ. 19: ಮಾಲ್ದಾರೆ ಕಾಫಿ ತೋಟದಲ್ಲಿ ಸೇರಿಕೊಂಡಿರುವ ಹುಲಿ ಹಿಡಿಯಲು ತಿತಿಮತಿ ಅರಣ್ಯ ವಲಯ ವತಿಯಿಂದ ತೋಟದಲ್ಲಿ ಬೋನ್ ಇಟ್ಟು ಕಾರ್ಯಾಚರಣೆಗೆ ಮುಂದಾಗಿದೆ.ಕಳೆದ 2 ತಿಂಗಳಿನಿಂದ ಅಲ್ಲಿನ ಬಿ. ಟಿ. ಕಾಡು ತೋಟದಲ್ಲಿ ಸೇರಿಕೊಂಡು ಪ್ರಾಣಿಗಳ ಬೇಟೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ತಿತಿಮತಿ ಹಾಗೂ ಚೆನ್ನಂಗಿ ಆರ್ಆರ್ಟಿ ತಂಡವು ಜಂಟಿಯಾಗಿ ಯೋಜನೆ ರೂಪಿಸಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಹಾಗೂ ಬೇಟೆಯಾಡಿರುವ ಬಗ್ಗೆ ಅರಿತುಕೊಂಡು ಹುಲಿ ಹಿಡಿಯಲು ಮುಂದಾಗಿದೆ. ಕಾಡು ಹಂದಿಯನ್ನು ಕೊಂದು ಹಾಕಿರುವದು ಪತ್ತೆಯಾಗಿದ್ದು, 4 ದಿನಗಳ ಹಿಂದೆಯಷ್ಟೆ ಕೊಂದಿರಬಹುದು ಎಂದು ಶಂಕಿಸಲಾಗಿದೆ. ಹಂದಿಯನ್ನು ಕೊಂದಿರುವ ಸ್ಥಳದಲ್ಲಿ ಬೋನ್ ಇಡಲಾಗಿದೆ.
ಕಾರ್ಯಾಚರಣೆ ಸಂದರ್ಭ ತಿತಿಮತಿ ಆರ್ಎಫ್ಒ ಅಶೋಕ್, ಡಿಅರ್ಎಫ್ಒ ಶ್ರೀನಿವಾಸ್, ಅರ್ಆರ್ಟಿ ತಂಡದ ನಾಯಕ ಸಂಜು ಸಂತೋಷ್ ಹಾಗೂ ತಂಡದವರು ಪಾಲ್ಗೊಂಡಿದ್ದಾರೆ.