ಕುಶಾಲನಗರ, ಅ. 21: ಕುಶಾಲನಗರವನ್ನು ಕೇಂದ್ರವಾಗಿರಿಸಿ ಕೊಂಡು ಕಾವೇರಿ ತಾಲೂಕು ರಚನೆ ಆಗ್ರಹವನ್ನು ಸರ್ಕಾರಕ್ಕೆ ತಲುಪಿಸುವ ಸಲುವಾಗಿ ಕಾರು ನಿಲ್ದಾಣದಲ್ಲಿರುವ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಸರಣಿ ಸತ್ಯಾಗ್ರಹ ಶನಿವಾರ 7ನೇ ದಿನ ಪೂರೈಸಿದೆ. ನೂತನ ಕಾವೇರಿ ತಾಲೂಕು ರಚನಾ ಕೇಂದ್ರೀಯ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಶನಿವಾರ ಕುಶಾಲನಗರ ವಕೀಲರ ಸಂಘ ಮತ್ತು ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನಿರಶನದಲ್ಲಿ ಪಾಲ್ಗೊಂಡಿದ್ದರು. ವಕೀಲರು ಶನಿವಾರದ ಕಲಾಪಕ್ಕೆ ರಜೆ ಹಾಕುವದರೊಂದಿಗೆ ತಾಲೂಕು ಬೇಡಿಕೆಯ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ತಾಲೂಕು ರಚನೆ ಪರ ಬೇಡಿಕೆಗಳನ್ನು ಕೂಗಿ ಸಂಜೆ ತನಕ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಪದಾಧಿಕಾರಿಗಳಾದ ವೆಂಕಟರಮಣ ರಾವ್, ಕೆ.ಬಿ. ಮೋಹನ್, ಎಸ್.ಪಿ. ನಂದಕುಮಾರ್, ಎಸ್.ಕೆ. ಮಂಜುನಾಥ್, ರಾಬಿನ್, ಹೆಚ್.ಎನ್. ಸುಧಾಕರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ಬೊಮ್ಮಯ್ಯ ಪದಾಧಿಕಾರಿಗಳಾದ ಪೊನ್ನಪ್ಪ, ಕೆ.ಎಂ. ಗಿರೀಶ್, ಉತ್ತಪ್ಪ, ಸಿ.ಸಿ. ರಾಘವಯ್ಯ, ಪಾರ್ವತಿ, ಎಂ.ಹೆಚ್. ನಜೀರ್ ಅಹಮ್ಮದ್ ಹೋರಾಟ ಸಮಿತಿಯ ವಿ.ಪಿ. ಶಶಿಧರ್, ಜಿ.ಎಲ್. ನಾಗರಾಜ್, ಹೆಚ್.ಎನ್. ರಾಮಚಂದ್ರ, ಎಂ.ಹೆಚ್. ಫಜಲುಲ್ಲಾ, ಅಬ್ದುಲ್ ಖಾದರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಸಮೀಪದ ಗೊಂದಿಬಸವನಹಳ್ಳಿ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ಅಂಚೆ ಕಾರ್ಡ್ ಚಳವಳಿಯ ಪತ್ರಗಳನ್ನು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರಿಗೆ ಗ್ರಾಮಸ್ಥರು ಹಸ್ತಾಂತರಿಸಿದರು.