ಕೂಡಿಗೆ, ಅ. 21: ಸಮೀಪದ ನಂಜರಾಯಪಟ್ಟಣ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡು ಮೂರು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದುಬಾರೆ ರಕ್ಷಿತಾರಣ್ಯದಿಂದ 8 ರಿಂದ 9 ಕಾಡಾನೆಗಳು ಕಾವೇರಿ ನದಿ ದಾಟಿ ರೈತರ ತೋಟಗಳಿಗೆ ಲಗ್ಗೆ ಇಟ್ಟು ಕಾಫಿ, ಅಡಿಕೆ, ಭತ್ತ, ಬಾಳೆ, ತೆಂಗು ಬೆಳೆಗಳನ್ನು ನಾಶ ಮಾಡಿವೆ.
ನಂಜರಾಯಪಟ್ಟಣ ಗ್ರಾಮದ ನಿವಾಸಿ ಅಂದಾನಿ ಮಲ್ಲಿಗೆ ರಾಜಶೇಖರ್ ಎಂಬವರಿಗೆ ಸೇರಿದ ಅಡಿಕೆ, ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಮನಸೋ ಇಚ್ಚೆ ತುಳಿದು ತಿನ್ನುವದಕ್ಕಿಂತ ಹೆಚ್ಚಾಗಿ ಬೆಳೆಯನ್ನು ಮುರಿದು ಹಾನಿ ಪಡಿಸಿದ್ದು ಸುಮಾರು 1.50 ಲಕ್ಷಕ್ಕೂ ಹೆಚ್ಚು ಮೊತ್ತದ ಬೆಳೆ ನಷ್ಟವಾಗಿದೆ. ಸ್ಥಳಕ್ಕೆ ಸ್ಥಳೀಯ ಅರಣ್ಯ ಸಿಬಂದಿಗಳು ಭೇಟಿ ನೀಡಿದ್ದರು.
ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಆಗಿರುವ ಬೆಳೆ ನಷ್ಟಕ್ಕೆಲ್ಲಾ ಕಾಡಾನೆಗಳು ಕಾರಣ ಎಂಬುದಕ್ಕಿಂತ ದುಬಾರೆ ಸಾಕಾನೆ ಶಿಬಿರದಲ್ಲಿರುವ ಕೆಲವು ಆನೆಗಳನ್ನು ಹೊರ ಬಿಡುವ ಪರಿಣಾಮ ಅವುಗಳೇ ಈ ರೈತರ ತೋಟಗಳಿಗೆ ನುಗ್ಗಿರುವ ಸಂದೇಹವಿದೆ. ಕಾರಣ ಆನೆಗಳ ಲದ್ದಿಯಲ್ಲಿ ಹುರಳಿ ಕಾಳು ಕಂಡುಬಂದಿದೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಸುಮೇಶ್ ಆರೋಪಿಸಿದ್ದಾರೆ.