ಮಡಿಕೇರಿ, ಅ. 21: ಕೊಡಗಿನ ಮೂಲ ನಿವಾಸಿಗಳಾದ ಜಮ್ಮಾ ಭೂ ಹಿಡುವಳಿದಾರರಿಗೆ ತಲತಲಾಂತರದಿಂದ ಬಂದಿರುವ ಕೋವಿಯ ಹಕ್ಕನ್ನು ಅಧಿಕಾರಿಗಳು ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕೊಡಗು ರೈತ ಸಂಘದ ಮುಖಂಡ ಆದೇಂಗಡ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಜಮ್ಮಾ ಕೋವಿ ದಾಖಲೆ ಪತ್ರಕ್ಕೆ ಅರ್ಜಿ ಸಲ್ಲಿಸುವ ಯುವಕರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಂದರ್ಶನ ನಡೆಸುತ್ತಿದ್ದಾರೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ವಂಶಪರಾಂಪರೆಯಿಂದ ಬಂದಿರುವ ಕೋವಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದರೆ, ಅಧಿಕಾರಿ ದಿನಾಂಕ ನಿಗದಿಗೊಳಿಸಿ ಸಂದರ್ಶನ ನಡೆಸುವ ಮೂಲಕ ಅರ್ಜಿದಾರರ ಪೂರ್ವಜರಿಗೆ ಕೋವಿ ಇರುವಾಗ ತಮಗೇಕೆ ಬೇಕು ಎಂಬಿತ್ಯಾದಿ ಮಾನಸಿಕ ಕಿರುಕುಳ ನೀಡಿ ಪರವಾನಗಿ ಕಲ್ಪಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಕೊಡವರ ಜನ್ಮ ಸಿದ್ಧ ಹಕ್ಕುಗಳನ್ನು ಜಿಲ್ಲೆಯ ಅಧಿಕಾರಿಗಳು ಅಧ್ಯಯನ ಮಾಡುವದು ಅಥವಾ ಅನುಭವಿಗಳಿಂದ ತಿಳಿದುಕೊಂಡು ಗೊಂದಲಕ್ಕೆ ಎಡೆಯಾಗದಂತೆ ಬೇಕು ಬೇಡಿಕೆಗಳಿಗೆ ಸ್ಪಂದಿಸುವಂತೆ ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಇಂತಹ ಆರೋಪಗಳು ಮರುಕಳಿಸಿದರೆ ಪ್ರತಿಭಟನೆ ನಡೆಸಬೇಕಾದೀತು ಎಂದು ಮುನ್ಸೂಚನೆ ನೀಡಿದ್ದಾರೆ.