ಮಡಿಕೇರಿ, ಅ. 21: ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್. ಯಡಿಯೂರಪ್ಪ ಅವರು ನ. 7 ಹಾಗೂ 8 ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಳ್ಳಲಿದ್ದು, ಜಿಲ್ಲೆಯ ಅಭಿವೃದ್ಧಿ ಸಂಬಂಧ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.
ಈ ಸಂಬಂಧ ಜಿಲ್ಲಾ ಬಿಜೆಪಿ ಮುಖಂಡರು ರಾಜ್ಯಾಧ್ಯಕ್ಷರ ಪ್ರವಾಸ ಸಂಬಂಧ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದು, ಇಂದು ಕೊಡಗು ಬಿಜೆಪಿ ಪ್ರಬಾರಿ ಉದಯಕುಮಾರ್ ಶೆಟ್ಟಿ ಆಗಮಿಸಿ ಯಡಿಯೂರಪ್ಪ ಭೇಟಿ ಹಿನ್ನೆಲೆಯಲ್ಲಿ ಚರ್ಚಿಸಿದರೆಂದು ತಿಳಿದು ಬಂದಿದೆ.
ನಗರದ ಸುದರ್ಶನ ಅತಿಥಿಗೃಹದಲ್ಲಿ ಶಾಸಕದ್ವಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ ಸೇರಿದಂತೆ ಬಿಜೆಪಿ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದು, ನ. 2 ರಂದು ಬೆಂಗಳೂರು ಚಲೋ ದ್ವಿಚಕ್ರ ವಾಹನ ‘ಜಾಥಾ’ ಬಗ್ಗೆಯೂ ಯೋಜನೆ ರೂಪಿಸಿದ್ದಾಗಿ ತಿಳಿದು ಬಂದಿದೆ.
ಜಿಲ್ಲೆಯ ಪ್ರತಿ ಮತಗಟ್ಟೆ ಕ್ಷೇತ್ರದಿಂದ ಕನಿಷ್ಟ 3 ದ್ವಿಚಕ್ರ ವಾಹನಗಳಂತೆ 1500ಕ್ಕೂ ಅಧಿಕ ಬೈಕ್‍ಗಳಲ್ಲಿ ಕೊಡಗಿನ ಕಾರ್ಯ ಕರ್ತರು ಬೆಂಗಳೂರಿನಲ್ಲಿ ಸಮಾವೇಶಕ್ಕೆ ತೆರಳಲು ನಿರ್ಧರಿಸಿದ್ದಾಗಿ ಗೊತ್ತಾಗಿದೆ. ಬಿಜೆಪಿ ಪದಾಧಿಕಾರಿಗಳಾದ ಎಸ್.ಬಿ. ರವಿಕುಶಾಲಪ್ಪ, ರಾಬಿನ್ ದೇವಯ್ಯ, ರವಿ ಕಾಳಪ್ಪ, ಎ.ಕೆ. ಲೋಕೇಶ್ ಮುಂತಾದವರು ಚರ್ಚೆಯಲ್ಲಿ ಭಾಗಿಯಾಗಿದ್ದರೆಂದು ಮೂಲಗಳು ಖಚಿತಪಡಿಸಿವೆ.