ಗೋಣಿಕೊಪ್ಪಲು, ಅ. 21: ಇಲ್ಲಿನ ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಫ್ಲೋರ್‍ಬಾಲ್ ಅಸೋಸಿಯೇಷನ್, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ನಡೆಯುತ್ತಿರುವ 3 ನೇ ವರ್ಷದ ರಾಜ್ಯಮಟ್ಟದ ಪದವಿಪೂರ್ವ ಬಾಲಕ, ಬಾಲಕಿಯರ ಫ್ಲೋರ್‍ಬಾಲ್ ಕ್ರೀಡಾಕೂಟದಲ್ಲಿ ಬಾಲಕರಲ್ಲಿ ಕೊಡಗು, ಬೆಂಗಳೂರು ಉತ್ತರ, ಬಾಲಕಿಯರಲ್ಲಿ ಕೊಡಗು ಹಾಗೂ ಮೈಸೂರು ತಂಡಗಳು ಫೈನಲ್‍ಗೆ ಪ್ರವೇಶ ಪಡೆದವು.
ಬಾಲಕರ ವಿಭಾಗ: ಬಾಲಕರ ವಿಭಾಗದಲ್ಲಿ ಕೊಡಗು ತಂಡ, ಬೆಂಗಳೂರು ಉತ್ತರ ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟಿವೆ. ಕೊಡಗು ತಂಡವು ಸೆಮಿಯಲ್ಲಿ ಮೈಸೂರು ವಿರುದ್ಧ 5-0 ಗೋಲುಗಳ ಅಂತರದಿಂದ ಜಯಗಳಿಸಿ ಫೈನಲ್‍ಗೆ ಪ್ರವೇಶ ಪಡೆಯಿತು. ಕೊಡಗು ತಂಡದಲ್ಲಿ ಆತಿಥೇಯ ಕಾವೇರಿ ಕಾಲೇಜಿನ ಆಟಗಾರರ ಪೂರ್ಣ ತಂಡ ಎಂಬುವದು ವಿಶೇಷತೆ ಯಾಗಿದೆ. ಮತ್ತೊಂದು ಸೆಮಿಯಲ್ಲಿ ಬೆಂಗಳೂರು ಉತ್ತರ ತಂಡವು ಬೆಂಗಳೂರು ದಕ್ಷಿಣ ವಿರುದ್ಧ 1-0 ಗೋಲುಗಳ ಅಂತರದಿಂದ ಜಯಿಸಿತು.
ಉಳಿದಂತೆ ಇದಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಮಂಡ್ಯ ತಂಡವು ಧಾರವಾಡ ವಿರುದ್ಧ 8-0 ಗೋಲುಗಳ ಜಯ ಪಡೆಯಿತು. ಬೆಂಗಳೂರು ಉತ್ತರ ತಂಡವು ಶೂಟೌಟಲ್ಲಿ ದಕ್ಷಿಣ ಕನ್ನಡ ವಿರುದ್ಧ 3-2 ಗೋಲುಗಳಿಂದ ಜಯಿಸಿತು. ಮೈಸೂರು ತಂಡವು ಚಿಕ್ಕೋಡಿ ವಿರುದ್ಧ 1-0 ಅಂತರದಲ್ಲಿ ಜಯ ಪಡೆಯಿತು. ಬೆಂಗಳೂರು ದಕ್ಷಿಣ ತಂಡವು ಮಂಡ್ಯ ವಿರುದ್ಧ 4-2 ಗೋಲುಗಳಿಂದ ಜಯ ಪಡೆಯಿತು.
ಬಾಲಕಿಯರ ವಿಭಾಗ: ಬಾಲಕಿಯರಲ್ಲಿ ಕೊಡಗು ತಂಡ ಹಾಗೂ ಮೈಸೂರು ತಂಡಗಳು ಫೈನಲ್‍ಗೆ ಪ್ರವೇಶ ಪಡೆಯಿತು. ಸೆಮಿಯಲ್ಲಿ ಕೊಡಗು ತಂಡವು ಚಿಕ್ಕೋಡಿ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯಿಸಿತು.
ಮತ್ತೊಂದು ಬಾಲಕಿಯರ ಸೆಮಿಯಲ್ಲಿ ಮೈಸೂರು ತಂಡವು ಮೂಡಬಿದಿರೆ ವಿರುದ್ಧ ಜಯ ಪಡೆಯಿತು. ಮೈಸೂರು ತಂಡ ಹೊಡೆದ ಗೋಲು ಅಂಪೈಯರ್ ಸೀಟಿ ಊದಿದ ನಂತರ ಗೋಲು ದಾಖಲಾಗಿದೆ ಎಂದು ಆರೋಪಿಸಿ ಮೂಡಬಿದಿರೆ ತಂಡ ಮೈಸೂರು ವಿರುದ್ಧ ಸೆಮಿಯಲ್ಲಿ ನಿಗಧಿತ ಸಮಯಕ್ಕೂ ಮೊದಲೇ ಮೈದಾನದಿಂದ ಹೊರ ನಡೆಯಿತು. ಇದರಿಂದಾಗಿ ಮೈಸೂರು ಫೈನಲ್‍ಗೆ ಪ್ರವೇಶ ಪಡೆಯಿತು.
ಇದಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ದಕ್ಷಿಣ ಕನ್ನಡವು ಮಂಡ್ಯ ವಿರುದ್ಧ 2-0 ಗೋಲುಗಳಿಂದ ಜಯ ಪಡೆಯಿತು. ಕೊಡಗು ತಂಡವು ಧಾರವಾಡ ವಿರುದ್ಧ 5-0 ಗೋಲುಗಳಿಂದ ಜಯ ಪಡೆಯಿತು.
ಮೈಸೂರು ತಂಡ ಬೆಂಗಳೂರು ವಿರುದ್ಧ 8-0 ಗೋಲುಗಳಿಂದ ಗೆದ್ದು ಬೀಗಿತು. ದಕ್ಷಿಣ ಕನ್ನಡ ತಂಡವು ಮಂಡ್ಯ ವಿರುದ್ಧ 2-0 ಗೋಲುಗಳ ಜಯ ಪಡೆಯಿತು.
ಉದ್ಘಾಟನೆ: ಕ್ರೀಡಾಕೂಟವನ್ನು ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ ಉದ್ಘಾಟಿಸಿದರು. ಈ ಸಂದರ್ಭ ಪಿ.ಯು. ಬೋರ್ಡ್ ಉಪನಿರ್ದೇಶಕ ಟಿ. ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಫ್ಲೋರ್ ಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮಿನ್ನಂಡ ಜೋಯಪ್ಪ, ಕಾವೇರಿ ವಿದ್ಯಾ ಸಂಸ್ಥೆ ನಿರ್ದೇಶಕ ಕೆ. ಪಿ. ಬೋಪಣ್ಣ, ಜಿ ಪಂ ಸದಸ್ಯ ಸಿ. ಕೆ. ಬೋಪಣ್ಣ, ವೀಕ್ಷಕ ಹಜಾರೆ ಹಾಗೂ ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಸಪಿನ್ಸ, ಪಿಯು ದೈಹಿಕ ನಿರ್ದೇಶಕ ಸಂತೋಶ್ ಉಪಸ್ಥಿತರಿದ್ದರು.
ಫೈನಲ್ ಪಂದ್ಯ ಭಾನುವಾರ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.