ಸೋಮವಾರಪೇಟೆ, / ಒಡೆಯನಪುರ, ಅ.21: ಜಾನಪದ ಸಂಸ್ಕøತಿ, ಪದ್ಧತಿ ಪರಂಪರೆಗಳಿಗೆ ಭಾರತವೇ ತಾಯಿಬೇರಾಗಿದ್ದು, ಇದಕ್ಕೆ ಬ್ರಿಟೀಷರೂ ಸಹ ಮಾರು ಹೋಗಿದ್ದರು. ಇಂತಹ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ. ಅನಂಶಯನ ಅಭಿಪ್ರಾಯಿಸಿದರು.

ಸಮೀಪದ ಶನಿವಾರಸಂತೆಯ ಸುಪ್ರಜ ಗುರುಕುಲದಲ್ಲಿ ಆಯೋಜಿಸಲಾಗಿದ್ದ ಪರಿಷತ್ತಿನ ಶನಿವಾರಸಂತೆ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದ ಎಂಬದು ಯಾವದೇ ಭಾಷೆ, ಜಾತಿ, ಜನಾಂಗ, ಧರ್ಮ, ಪ್ರದೇಶಗಳಿಗೆ ಸೀಮಿತವಾಗಿಲ್ಲ. ಇದು ಎಲ್ಲರ ಜೀವನ ಕ್ರಮವಾಗಿದೆ. ನಮ್ಮ ಸಂಸ್ಕøತಿಯನ್ನು ಅಧ್ಯಯನ ಮಾಡಿದ ಹಲವಷ್ಟು ಬ್ರಿಟೀಷ್ ಸಂಶೋಧ ನಾಕಾರರೂ ಸಹ ಭಾರತೀಯ ಜಾನಪದ ಸಂಸ್ಕøತಿಗೆ ಮಾರು ಹೋಗಿದ್ದರು. ಭಾರತ ಜಾನಪದದ ತವರಿನಂತಿದ್ದು, ಇದಕ್ಕೆ ಗ್ರಾಮೀಣ ಪ್ರದೇಶಗಳೇ ಬೆನ್ನೆಲುಬಾಗಿವೆ ಎಂದು ಅವರು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಸರೋಜಮ್ಮ, ಓದು ಬರಹ ತಿಳಿಯದೇ ಇದ್ದಂತಹ ಪೂರ್ವಿಕರ ಹೃದಯಾಂತರಾಳದಿಂದ ಮೂಡಿಬಂದಂತಹ ಜಾನಪದವನ್ನು ಇಂದು ಮರೆಯುತ್ತಿದ್ದೇವೆ. ಮದುವೆ ಮನೆಯಲ್ಲಿ ಸೋಬಾನೆ ಪದಗಳಿದ್ದ ಸ್ಥಳದಲ್ಲಿ ಮೈಕ್ ಮೂಲಕ ಚಲನಚಿತ್ರಗೀತೆಗಳು ಮೂಡಿಬರುತ್ತಿವೆ. ಜಾನಪದ ಕಲಾವಿದರಿಂದ ಮೂಡಿಬರುತ್ತಿದ್ದ ಗೀತೆಗಳನ್ನು ಮೊಬೈಲ್ ಮೂಲಕ ಕೇಳುವಂತಾಗಿದೆ ಎಂದು ವಿಷಾಧಿಸಿದರಲ್ಲದೇ, ಜೀವನದ ಸಾರವೇ ಜಾನಪದಲ್ಲಿದ್ದು, ಇವುಗಳನ್ನು ಜೀವಂತವಾಗಿಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯ ಅನಂತ್‍ಕುಮಾರ್ ಮಾತನಾಡಿ, ಜಾನಪದ ಸಂಸ್ಕøತಿ ಇತ್ತೀಚಿನ ದಿನಗಳಲ್ಲಿ ಹೊಳಪನ್ನು ಕಳೆದುಕೊಂಡಿದೆಯೇ ಹೊರತು, ಮೌಲ್ಯಗಳನ್ನು ಕಳೆದುಕೊಂಡಿಲ್ಲ. ಪ್ರಾಚೀನ ಶ್ರೀಮಂತಿಕೆಯ ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲೂ ಜಾನಪದ ಶಿಕ್ಷಣ ಅಳವಡಿಸಬೇಕು ಎಂದರು.

ಶನಿವಾರಸಂತೆ ಹೋಬಳಿ ಘಟಕ ಉದ್ಘಾಟಿಸಿದ ತಾಲೂಕು ಅಧ್ಯಕ್ಷ ಚಂದ್ರಮೋಹನ್ ಮಾತನಾಡಿ, ಜಾನಪದ ಪರಿಷತ್‍ನಿಂದ ಒಂದೂವರೆ ವರ್ಷದಲ್ಲೇ ಸೋಮವಾರಪೇಟೆಯಲ್ಲಿ 2 ಹೋಬಳಿ ಘಟಕ ರಚಿಸಲಾಗಿದ್ದು, ಸುಂಟಿಕೊಪ್ಪದಲ್ಲಿ ಶೀಘ್ರದಲ್ಲೇ ನೂತನ ಸಮಿತಿ ರಚಿಸಲಾಗುವದು ಎಂದರು.

ಹೋಬಳಿ ಘಟಕದ ನೂತನ ಅಧ್ಯಕ್ಷೆ ಸುಜಲಾದೇವಿ ಮಾತನಾಡಿ, ಜನ ಜೀವನದಲ್ಲಿ ಹಾಸುಹೊಕ್ಕಾಗಿರುವ ಹೂರಣವೇ ಜಾನಪದ ಆಗಿದ್ದು, ಆಧುನಿಕ ಜೀವನ ಭರಾಟೆಯಲ್ಲಿ ಪೂರ್ವಿಕರ ಶ್ರೀಮಂತಿಕೆಯನ್ನು ಮರೆಯುತ್ತಿದ್ದೇವೆ. ಇದನ್ನು ಉಳಿಸುವ ಕಾರ್ಯವನ್ನು ಜಾನಪದ ಪರಿಷತ್ ವತಿಯಿಂದ ಮಾಡಲಾಗುವದು ಎಂದರು.

ವೇದಿಕೆಯಲ್ಲಿ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಎಸ್. ವಸಂತ್‍ಕುಮಾರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರತಾಪ್, ಕರಟ ವಾದನ ಕಲಾವಿದ ಬೆಸೂರು ಶಾಂತೇಶ್, ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಉಜ್ವಲ್ ರಂಜಿತ್ ಅವರುಗಳು ಉಪಸ್ಥಿತರಿದ್ದರು. ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷರುಗಳಾದ ಅಂಬೇಕಲ್ ಕುಶಾಲಪ್ಪ, ರಾಣಿ ಮಾಚಯ್ಯ ಪಾಲ್ಗೊಂಡಿದ್ದರು.

ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಹರೀಶ್ ನಿರೂಪಿಸಿ, ಕೆಂಚಮ್ಮ ಪ್ರಾರ್ಥಿಸಿದರು. ಸೋಮಶೇಖರ್ ಸ್ವಾಗತಿಸಿ, ಚೆರಿಯಮನೆ ಸುರೇಶ್ ವಂದಿಸಿದರು. ದಿನೇಶ್ ಮಾಲಂಬಿ, ಸುರೇಶ್ ಒಡೆಯನಪುರ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು.