ಸುಂಟಿಕೊಪ್ಪ, ಅ. 21: ಕುಶಾಲನಗರದ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ವತಿಯಿಂದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಗ್ರಾಹಕ ಕ್ಲಬ್, ಸರ್ಕಾರಿ ಪದವಿಪೂರ್ವ ಕಾಲೇಜಿನ ವನಸುಮ ಇಕೋ-ಕ್ಲಬ್‍ಹಾಗೂ ಕಾಲೇಜಿನ ರಾಜ್ಯ ವಿಜ್ಞಾನ ಪರಿಷತ್ ಘಟಕದ ವತಿಯಿಂದ ವಿಶ್ವ ಆಹಾರ ದಿನ ಹಾಗೂ ಆಹಾರ ಸಂರಕ್ಷಣೆ ಕುರಿತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಸರ್ಕಾರಿ ಪ್ರೌಢಶಾಲಾ ಆವರಣದಿಂದ ಆರಂಭಗೊಂಡ ಅಭಿಯಾನಕ್ಕೆ ಚಾಲನೆ ನೀಡಿದ ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‍ವಾಸ್ ಮಾತನಾಡಿ, ದೇಶದಲ್ಲಿ ಒಂದೆಡೆ ಲಕ್ಷಾಂತರ ಮಂದಿ ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಐಷರಾಮಿ ಜೀವನ ನಡೆಸುವ ಕೆಲವರು ಆಡಂಬರದ ಮದುವೆ ಮತ್ತಿತರ ಸಮಾರಂಭಗಳಲ್ಲಿ ಆಹಾರ ಪೋಲು ಮಾಡುತ್ತಿರುವದು ದುರ್ದೈವದ ಸಂಗತಿಯಾಗಿದೆ ಎಂದರು.

ಪ್ರತಿಯೊಬ್ಬರೂ ಆಹಾರ ಸಂರಕ್ಷಣೆ ಮಾಡುವ ಮೂಲಕ ರೈತರು ಕಷ್ಟಪಟ್ಟು ಬೆಳೆಯುವ ಕೃಷಿ ಧಾನ್ಯಗಳ ಸಂರಕ್ಷಣೆ ಮಾಡುವ ಮೂಲಕ ದೇಶದಲ್ಲಿರುವ ಹಸಿವು ನೀಗಿಸುವಲ್ಲಿ ಕಂಕಣಬದ್ಧರಾಗಬೇಕಿದೆ ಎಂದರು.

‘ತಿನ್ನುವ ಹಕ್ಕಿದೆ - ಬಿಸಾಡುವ ಹಕ್ಕು ನಮಗಿಲ್ಲ’ ಎಂಬ ಧ್ಯೇಯದೊಂದಿಗೆ ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ಉದ್ದೇಶದ ಕುರಿತು ವಿವರಿಸಿದ ಗ್ರಾಹಕ ಕ್ಲಬ್‍ನ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಆಹಾರ ಸಂರಕ್ಷಣೆಯ ಮಹತ್ವ ಹಾಗೂ ಆಹಾರದಲ್ಲಿ ಕಲಬೆರೆಕೆ ತಡೆಗಟ್ಟುವಿಕೆ ಬಗ್ಗೆ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ದೇಶದಲ್ಲಿ ಆಹಾರ ಅಪವ್ಯಯ ತಡೆಗಟ್ಟುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುಶಾಲನಗರದ ಎನ್.ಕೆ. ಮೋಹನ್‍ಕುಮಾರ್ ನೇತೃತ್ವದಲ್ಲಿ ಆರಂಭಿಸಿರುವ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ ಇದೀಗ ವಿವಿಧ ಸಂಘಟನೆಗಳ ಮೂಲಕ ಆಹಾರ ಸಂರಕ್ಷಣಾ ಆಂದೋಲನ ರಾಜ್ಯಾದ್ಯಂತ ವ್ಯಾಪಿಸಿದೆ ಎಂದರು.

‘ವಿಶ್ವ ಆಹಾರ ದಿನ’ದ ಮಹತ್ವ ಕುರಿತು ವಿವರಿಸಿದ ಶಾಲೆಯ ವಿಜ್ಞಾನ ಸಂಘದ ಸಂಚಾಲಕಿ, ಎಂ.ಎನ್. ಲತಾ, ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಆಹಾರವನ್ನು ಪೋಲು ಮಾಡದೆ ಭವಿಷ್ಯದಲ್ಲಿ ಎದುರಾಗ ಬಹುದಾದ ಅನ್ನಕ್ಷಾಮವನ್ನು ತಡೆಗಟ್ಟುವ ದಿಸೆಯಲ್ಲಿ ನಾವೆಲ್ಲಾ ಜಾಗೃತರಾಗಬೇಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪಿ. ಸೋಮಚಂದ್ರ ಮಾತನಾಡಿ, ಆಹಾರ ಸಂರಕ್ಷಣಾ ಅಭಿಯಾನಕ್ಕೆ ಪೂರಕವಾಗಿ ಶಾಲೆಗಳಲ್ಲಿ ನಡೆಯುತ್ತಿರುವ ಬಿಸಿಯೂಟ ಯೋಜನೆ ಸೇರಿದಂತೆ ಯಾವದೇ ಸಂದರ್ಭ ವಿದ್ಯಾರ್ಥಿಗಳು ಆಹಾರವನ್ನು ವ್ಯರ್ಥ ಮಾಡಬಾರದು ಎಂದರು.

ಉಪನ್ಯಾಸಕ ಎಸ್.ಹೆಚ್. ಈಶ, ಆಹಾರ ಸಂರಕ್ಷಣೆಯು ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿದೆ ಎಂದರು. ವಿಶ್ವ ಆಹಾರ ದಿನದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ‘ತಿನ್ನುವಹಕ್ಕಿದೆ- ಬಿಸಾಡುವ ಹಕ್ಕು ನಮಗಿಲ್ಲ’ ಎಂಬ ಘೋಷವಾಕ್ಯ ದೊಂದಿಗೆ ಆಹಾರ ಸಂರಕ್ಷಣೆ ಕುರಿತಂತೆ ಜಾಗೃತಿ ಜಾಥಾ ನಡೆಸುವ ಮೂಲಕ ಜನರ ಗಮನ ಸೆಳೆದರು.