ಮಡಿಕೇರಿ, ಅ. 21: ಇತ್ತೀಚೆಗೆ ನಡೆದಿರುವ ಕೊಡಗು ಜಿಲ್ಲಾ ಪಂಚಾಯತ್ ಸಭೆಯಲ್ಲಿ ರಾಜ್ಯ ಸರಕಾರದಿಂದ ಟಿಪ್ಪು ಜಯಂತಿ ಆಚರಣೆ ಸಂಬಂಧ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ಯೊಂದಿಗೆ, ಕೊಡಗಿನಲ್ಲಿ ಸ್ಥಳೀಯರ ಭಾವನೆಗೆ ವಿರುದ್ಧವಾಗಿ ಜಿಲ್ಲಾಡಳಿತ ಟಿಪ್ಪು ಜಯಂತಿ ಆಚರಿಸದಂತೆ ನಿರ್ಣಯ ಮಂಡಿಸಲಾಗಿದೆ.ಆದರೆ ರಾಜ್ಯ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ಟಿಪ್ಪು ಜಯಂತಿ ಆಯೋಜನೆಗೆ ಕಾಂಗ್ರೆಸ್ಸಿನ ಕೆಲವರು ಒತ್ತಾಯಿಸುವದ ರೊಂದಿಗೆ ನಿರ್ಣಯವನ್ನು ಆಕ್ಷೇಪಿಸಿ ರುವದು ಜಿಲ್ಲೆಯಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಈಗಾಗಲೇ ಟಿಪ್ಪು ಜಯಂತಿಗೆ ಪರ-ವಿರೋಧ ಟೀಕೆಗಳು ವ್ಯಕ್ತಗೊಳ್ಳತೊಡಗಿದೆ.
ಈ ಹಿನ್ನೆಲೆಯಲ್ಲಿ ಪ್ರಸಕ್ತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಪ್ರಬಾರ ಕಾರ್ಯನಿರ್ವಹಣಾಧಿಕಾರಿಗಳಾಗಿರುವ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ, ಟೀಕೆ ಅಥವಾ ಟಿಪ್ಪು ಜಯಂತಿಯ ಪರ ಹಾಗೂ ವಿರುದ್ಧ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಕೆಲವರು ಜವಾಬ್ದಾರಿ ಸ್ಥಾನದಲ್ಲಿ ಜಿಲ್ಲೆಯ ಸಾಮರಸ್ಯದೊಂದಿಗೆ ಶಾಂತಿ ಕಾಪಾಡುವ ಬದಲಿಗೆ ಗೊಂದಲಮಯ ಹೇಳಿಕೆಗಳನ್ನು ನೀಡಿದರೆ ಆ ಬಗ್ಗೆ ತಾವೇನೂ ಪ್ರತಿಕ್ರಿಯೆ ನೀಡಲಾರೆ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿ, ಕೊಡಗಿನ ಜನತೆಯ ಹಿತವನ್ನು ಕಾಪಾಡುವ ಸಲುವಾಗಿ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವದಾಗಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಆ ಕುರಿತು ಪರಸ್ಪರ ಚರ್ಚೆಯನ್ನು ನಡೆಸುತ್ತಾರೆ. ಆ ಮಾತ್ರಕ್ಕೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳದೆ, ಕಾನೂನಿನ ಚೌಕಟ್ಟಿನಲ್ಲಿ ಜನತೆಯ ಹಿತವನ್ನು ಗಮನದಲ್ಲಿ ಇರಿಸಿಕೊಂಡು ವ್ಯವಹರಿಸುತ್ತಾರೆ ಎಂದು ಅವರು ಸೂಚ್ಯವಾಗಿ ಹೇಳಿದರು.
ಎಸ್ಪಿ ಸ್ಪಷ್ಟನೆ: ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಜವಾಬ್ದಾರಿಯುತರು ರಾಜಕೀಯ ನೆಲೆಯಲ್ಲಿ ಹೇಳಿಕೆಗಳನ್ನು ನೀಡುವ ಅಧಿಕಾರ ಹೊಂದಿದ್ದರೂ, ಕಾನೂನಿನ ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆ ತನ್ನ ಕೆಲಸ ನಿರ್ವಹಿಸಲಿದೆ ಎಂದರು. ಯಾವದೇ ಸಂದರ್ಭದಲ್ಲಿ ಕೊಡಗಿನ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೆಂದು ಎಸ್ಪಿ ಇದೇ ವೇಳೆ ನೆನಪಿಸಿದ್ದಾರೆ.
ಜಿ.ಪಂ. ಅಧ್ಯಕ್ಷರ ಪ್ರತಿಕ್ರಿಯೆ: ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ತಾ. 1 ರಂದು ನಡೆದ ಜಿ.ಪಂ. ಸಭೆಯಲ್ಲಿ ಟಿಪ್ಪು ಜಯಂತಿ ಕೊಡಗಿನಲ್ಲಿ ಆಚರಣೆ ಬೇಡವೆಂದು
(ಮೊದಲ ಪುಟದಿಂದ) ಬಹುಮತದ ನಿರ್ಣಯ ಕೈಗೊಂಡಿರುವದಾಗಿ ಪುರುಚ್ಛರಿಸಿದ್ದಾರೆ. ಅಲ್ಲದೆ ಯಾವದೇ ಕಾರಣಕ್ಕೂ ಜನತೆಯ ಭಾವನೆಗೆ ವಿರುದ್ಧವಾಗಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಲಾಗದು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪ್ರಸಕ್ತ ಟಿಪ್ಪು ಜಯಂತಿ ಆಚರಣೆ ಸಂಬಂಧ ಗೊಂದಲಮಯ ಹೇಳಿಕೆಗಳು ಶುರವಾಗಿದ್ದು, ಜಿ.ಪಂ. ಟಿಪ್ಪು ಜಯಂತಿ ವಿರುದ್ಧದ ಜಿ.ಪಂ. ನಿರ್ಣಯಕ್ಕೆ ಕಾಂಗ್ರೆಸ್ ಬಹಿರಂಗವಾಗಿ ಆಕ್ಷೇಪಿಸಿದೆ.
ಅಧ್ಯಕ್ಷರ ಆಕ್ಷೇಪ: ಜಿ.ಪಂ. ಸದಸ್ಯರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಶಿವು ಮಾದಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮೌನ ವಹಿಸಿರುವ ಜಿ.ಪಂ. ಆಡಳಿತ ಪ್ರಮುಖರು, ಟಿಪ್ಪು ಜಯಂತಿ ವಿರುದ್ಧ ನಿರ್ಣಯ ಕೈಗೊಳ್ಳುವ ಬದಲಿಗೆ ವಿಯೆಟ್ನಾಂ ಕರಿಮೆಣಸು ಆಮದು ದಂದೆ ವಿರುದ್ಧ ರೈತರ ಹಿತ ಕಾಪಾಡಲು ನಿರ್ಣಯ ತೆಗೆದುಕೊಳ್ಳಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.