ಗೋಣಿಕೊಪ್ಪಲು,ಅ.21: ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಗ್ರಾ.ಪಂ.ಗೆ ವಾರ್ಷಿಕವಾಗಿ ತಲಾ ರೂ.1 ಕೋಟಿಗೂ ಅಧಿಕ ಅನುದಾನ ಬರುತ್ತಿತ್ತು. ಇದೀಗ ತಾ.ಪಂ ಹಾಗೂ ಜಿ.ಪಂ.ಗೂ ಕೇಂದ್ರದಿಂದ ಅನುದಾನ ಬಿಡುಗಡೆಯಾಗದೆ ಗ್ರಾಮೀಣ ಭಾಗದ ಕುಡಿಯುವ ನೀರು, ಗ್ರಾಮೀಣ ರಸ್ತೆ ಹಾಗೂ ಹಲವು ಮೂಲ ಸೌಕರ್ಯಗಳ ಅಭಿವೃದ್ಧಿ ಕುಂಠಿತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೊಡಗಿಗೆ ವಿಶೇಷ ಪ್ಯಾಕೇಜ್ ಮೂಲಕ ಸ್ಪಂದನೆ ನೀಡುತ್ತಿರುವದಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು.
ಮಾಯಮುಡಿ ಗ್ರಾ.ಪಂ.ವ್ಯಾಪ್ತಿಯ ರುದ್ರಬೀಡು-ಅಲೇಮಾಡ ಕುಟುಂಬ ರಸ್ತೆ ಅಭಿವೃದ್ಧಿ ಒಳಗೊಂಡಂತೆ ಒಟ್ಟು ರೂ.39 ಲಕ್ಷ ಅಂದಾಜು ವೆಚ್ಚದಲ್ಲಿ 8 ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಪಕ್ಷದ ಶಾಸಕರಿದ್ದಾಗ್ಯೂ ಮಾಯಮುಡಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಹಲವು ಸಮಸ್ಯೆಗಳಿದೆ. ಕೊಡಗಿನಲ್ಲಿ ಬಿಜೆಪಿ ಜನಪ್ರತಿನಿಧಿಗಳು ಅಧಿಕವಿದ್ದಾಗ್ಯೂ ಸಿದ್ದರಾಮಯ್ಯ ಅವರು ತಾರತಮ್ಯ ಮಾಡದೇ ವಾರ್ಷಿಕವಾಗಿ ವಿಶೇಷ ಪ್ಯಾಕೇಜ್ ಮೂಲಕ ರೂ.50 ಕೋಟಿ ಬಿಡುಗಡೆ ಮಾಡುತ್ತಿದ್ದಾರೆ. ನಮಗೆ ಪುಕ್ಕಟೆ ಪ್ರಚಾರ ಬೇಕಾಗಿಲ್ಲ. ಇನ್ನೂ ಮಾಯಮುಡಿ ವ್ಯಾಪ್ತಿಯ 24 ರಸ್ತೆ ಅಭಿವೃದ್ಧಿಗೆ ರೂ.1.04 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ನಿಯೋಗ ತೆರಳಿ ಬಿಡುಗಡೆಗೆ ಮನವಿ ಮಾಡಲಾಗುವದು ಎಂದು ಹೇಳಿದರು. ಇದೇ ಸಂದರ್ಭ ನೆನೆಗುದಿಗೆ ಬಿದ್ದಿರುವ ಮಾಯಮುಡಿ ಗ್ರಾ.ಪಂ.ಕಟ್ಟಡ ಕಾಮಗಾರಿಗೆ ತನ್ನ ಪರಿಷತ್ ಅನುದಾನದಲ್ಲಿ ರೂ.5 ಲಕ್ಷ ನೀಡುವದಾಗಿ ಭರವಸೆ ನೀಡಿದರು.
ಮಾಜಿ ಎಂಎಲ್‍ಸಿ ಅರುಣ್‍ಮಾಚಯ್ಯ ಅವರು ಮಾತನಾಡಿ, ರಾಜ್ಯದ ಯಾವದೇ ಜಿಲ್ಲೆಗೆ ಕೊಡಗು ಹೊರತು ಪಡಿಸಿದಂತೆ ವಿಶೇಷ ಪ್ಯಾಕೇಜ್ ಅನುದಾನ ನೀಡುತ್ತಿಲ್ಲ. ಕೊಡಗಿನ ಕಾವೇರಿ ಕುಡಿಯುವ ನೀರು ಇದೀಗ ಬೆಂಗಳೂರಿಗೆ ಪೂರೈಸಲು 6 ನೇ ಹಂತ ಯೋಜನೆ ಜಾರಿಯಲ್ಲಿದೆ. ಕೇಂದ್ರವು ಗ್ರಾ.ಪಂ.ಗಳಿಗೆ 14 ನೇ ಹಣಕಾಸು ಯೋಜನೆಯಲ್ಲಿ ಅನುದಾನವನ್ನು ಮೊಟಕುಗೊಳಿಸಿದೆ.
(ಮೊದಲ ಪುಟದಿಂದ) ಪಶ್ಚಿಮ ಘಟ್ಟ ಯೋಜನೆಯಲ್ಲಿ ಈ ಹಿಂದೆ ರೂ.20 ಕೋಟಿ ಅನುದಾನವನ್ನು ಯುಪಿಎ ಸರ್ಕಾರ ನೀಡುತ್ತಾ ಬಂದಿತ್ತು. ಈಗ ಕೇವಲ ರೂ.3 ಕೋಟಿಗೆ ಸೀಮಿತ ಮಾಡಲಾಗಿದೆ. ಈ ಹಿಂದೆ ಜಿ.ಪಂ.ಸದಸ್ಯರಿಗೆ ತಲಾ ರೂ.2 ಕೋಟಿಯಂತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಪಕ್ಷರಾಜಕೀಯ ಮಾಡದೆ ಕೊಡಗಿಗೆ ಅಧಿಕ ಅನುದಾನ ನೀಡುತ್ತಾ ಬಂದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಬಿ.ಎನ್.ಪ್ರಥ್ಯು, ಪಿ.ಆರ್.ಪಂಕಜ, ಮಾಜಿ ತಾ.ಪಂ.ಸದಸ್ಯ ಆಪಟ್ಟಿರ ಟಾಟು ಮೊಣ್ಣಪ್ಪ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್‍ರೆಹಮಾನ್ ಬಾಪು, ರಾಜ್ಯ ಘಟಕದ ಸಂಘಟನಾ ಸಂಚಾಲಕ ಆಲೀರ ರಶೀದ್, ಮಾಯಮುಡಿ ಗ್ರಾ.ಪಂ.ಉಪಾಧ್ಯಕ್ಷೆ ಗೌರಿ ರಾಮು, ತಿತಿಮತಿ ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್, ಪ್ರಮುಖರಾದ ಟಿಪ್ಪು ಬಿದ್ದಪ್ಪ, ಮಡಿಕೇರಿ ತಾ.ಪಂ.ಸದಸ್ಯ ರವೀಂದ್ರ ಅಪ್ಪಚ್ಚು, ಕಾಂಡಂಡ ಸುಬ್ಬಯ್ಯ, ಎಸ್.ಎಂ.ವಿಶ್ವನಾಥ್, ಗ್ರಾ.ಪಂ. ಸದಸ್ಯರಾದ ಪಿ.ಬಿ.ಮಂಜುಳಾ, ಟಿ.ವಿ.ಶ್ರೀಧರ್, ಬುಸುರಾ, ರುಕ್ಮಿಣಿ, ಶಾಂತಾ, ಸೌಮ್ಯ ಮೊಣ್ಣಪ್ಪ, ಶೋಭಾರಾಣಿ, ರಾಯ್ ಮಾದಪ್ಪ, ಸಿ.ಕೆ.ಚಿಣ್ಣಪ್ಪ, ಹರೀಶ್, ಜಿ.ಪಂ.ಅಭಿಯಂತರ ಲಿಂಗರಾಜು ಮುಂತಾದವರು ಉಪಸ್ಥಿತರಿದ್ದರು. ವರದಿ: ಟಿ.ಎಲ್.ಶ್ರೀನಿವಾಸ್