ಗೋಣಿಕೊಪ್ಪಲು, ಅ. 21: ಹತ್ತೊಂಬತ್ತು ಸಾವಿರದ ಆರುನೂರ ಎಂಬತ್ತಮೂರು ಅಡಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯ ಡಿಯೋಟಿಬಾ ಶಿಖರ ಏರುವ ಮೂಲಕ ಕೊಡಗಿನ ಬುಡಕಟ್ಟು ಗಿರಿಜನ ಯುವಕರ ತಂಡ ಸಾಹಸ ಮೆರೆದು ಕನ್ನಡ ಧ್ವಜವನ್ನು ನೆಟ್ಟು ರಾಜ್ಯದ ಕೀರ್ತಿಯನ್ನು ಬೆಳಗಿದ್ದಾರೆ. ಜಿಲ್ಲಾ ಗಿರಿಜನ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಿಮಾಚಲ ಪ್ರದೇಶದ ಮಾನಾಲಿ ನಗರದಲ್ಲಿರುವ ಅಟಲ್‍ಬಿಹಾರಿ ವಾಜಪೇಯಿ ಮೌಂಟನಿಯರಿಂಗ್ ಸಂಸ್ಥೆಯ ಅಡ್ವಾನ್ಸ್ ಮೌಂಟ ನಿಯರಿಂಗ್ ತರಬೇತಿಯನ್ನು 30 ದಿನಗಳು ಪಡೆದ ನಂತರ ಹಿಮಾಲಯ ಪರ್ವತ ಶ್ರೇಣಿಯನ್ನು ಏರಿದ ಗಿರಿಜನರ ತಂಡ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾ.ಪಂ ಚೇಣಿ ಹಡ್ಲು ಹಾಡಿ ನಿವಾಸಿಗಳಾದ ಸಂಜಿತ್, ಪ್ರೀತಮ್, ಸನತ್ ಹಾಗೂ ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ಹಾಡಿಯ ಮಧು, ಮನು ಈ ಐವರು ಹಿಮಾಲಯ ಪರ್ವತ ಶ್ರೇಣಿಯನ್ನು ಏರಿ ಕನ್ನಡದ ಧ್ವಜವನ್ನು ಹಾರಿಸಿ ಇದೀಗ ಸ್ವಗ್ರಾಮಕ್ಕೆ ಹಿಂದಿರುಗಿದ್ದಾರೆ.

ಜಿಲ್ಲಾ ಗಿರಿಜನರ ಅಭಿವೃದ್ಧಿಯ ಇಲಾಖೆ ಅಧಿಕಾರಿ ವಿರೂಪಾಕ್ಷ ರೈ ಈ ಐವರ ತಂಡಕ್ಕೆ ಬೆಂಬಲವಾಗಿ ನಿಂತು ಯುವಕರ ಸಾಹಸಕ್ಕೆ ದೈರ್ಯ ತುಂಬಿ ದಾಖಲೆ ನಿರ್ಮಿಸಲು ಕೈಜೋಡಿಸಿದ್ದರು. ತಂಡದ ಐವರು ಸದಸ್ಯರ ಪ್ರಯಾಣ ವೆಚ್ಚವನ್ನು ಇಲಾಖೆ ವಹಿಸಿಕೊಂಡು ಶೂ, ಟ್ರ್ಯಾಕ್ ಶೂಟ್, ಟ್ರಕ್ಕಿಂಗ್ ಶೂಟ್, ಸೇರಿದಂತೆ ಇನ್ನಿತರ ವಿವಿಧ ಉಪಯೋಗಿ ವಸ್ತುಗಳನ್ನು ನೀಡುವ ಮೂಲಕ ಪರ್ವತ ಏರಲು ಯುವಕರ ತಂಡಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಸೆಪ್ಟಂಬರ್ 20ರಂದು ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ ಗಿರಿಜನ ಯುವಕರ ತಂಡ ಅಕ್ಟೋಬರ್ 17ರಂದು ಪರ್ವತ ಶ್ರೇಣಿಯನ್ನು ಏರಿ ಹೊಸ ದಾಖಲೆ ನಿರ್ಮಿಸಿದರು. ಇಂದು ಸ್ವಗ್ರಾಮಕ್ಕೆ ಹಿಂದಿರುಗುತ್ತಿರುವ ತಂಡವನ್ನು ಬುಡಕಟ್ಟು ಜನಾಂಗದ ಸಂಘ ಮೈಸೂರಿನಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡು ಗೌರವಿಸಿತು.