ಗೋಣಿಕೊಪ್ಪಲು, ಅ. 23: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಹಾಗೂ ಬೆಂಗಳೂರು ರೋಟರಿ ಸಂಸ್ಥೆ ಸಹಯೋಗದಲ್ಲಿ 16 ಶಾಲೆಗಳಿಗೆ ಅಂಗರಚನಾ ಶಾಸ್ತ್ರದ ಮಾದರಿಗಳನ್ನು ವಿತರಣೆ ಮಾಡಲಾಯಿತು.
ಇಲ್ಲಿನ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜಮ್ಮಡ ಎ. ಕರುಂಬಯ್ಯ ವಿತರಣೆ ಮಾಡಿದರು.
ಜಮ್ಮಡ ಕರುಂಬಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್ ತುಂಬಾ ಪ್ರಯೋಜನಕಾರಿಯಾಗುತ್ತಿದೆ. ಶಾಲೆಗಳಲ್ಲಿ ಇಂತಹ ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆ ಇದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗ್ರಹಿಕ ಶಕ್ತಿ ವೃದ್ಧಿಸಲು ಮಾದರಿಗಳ ಪ್ರಾತ್ಯಕ್ಷಿಕೆಗಳ ಮೂಲಕ ಸಾಧ್ಯವಿದೆ. ಪಠ್ಯ ಬೋಧನೆಗಳಿಂದ ಕೇವಲ ಶೆ. 65 ರಷ್ಟು ಮಾತ್ರ ಫಲಿತಾಂಶ ಕಾಣಲು ಸಾಧ್ಯವಿದೆ. ಆದರೆ, ಪ್ರಾತ್ಯಕ್ಷಿಕೆ ಅಥವಾ ವಿಷಯಗಳ ದೃಶ್ಯ ಅನಾವರಣ ಪಡಿಸಿ ಹೇಳುವದರಿಂದ ಫಲಿತಾಂಶದಲ್ಲಿ ಶೇಕಡವಾರು ಹೆಚ್ಚುವ ಸಾಧ್ಯತೆ ಇದೆ ಎಂದರು.
ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿರ್ದೇಶಕ ಅಕ್ಬರ್ ಪಾಷಾ ಮಾತನಾಡಿ, ನಿಗಮದ ಮಂಡಳಿಯ ಶೇ. 2 ಲಾಭವನ್ನು ಸಾಮಾಜಿಕ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ. ತಲಾ 22 ಸಾವಿರದಂತೆ ಮಾದರಿ ವಿತರಣೆ ಮಾಡಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಕಲಿಕಾ ಗುಣಮಟ್ಟ ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಮಾದರಿಗಳು ಅಮೂಲ್ಯ ಪಾತ್ರವಹಿಸುತ್ತವೆ. ಸಂಘ ಸಂಸ್ಥೆಗಳು ಮುತುವರ್ಜಿ ವಹಿಸಿಕೊಂಡು ಶಾಲೆಗಳ ಪ್ರಯೋಗಾಲಯಗಳ ಅಭಿವೃದ್ಧಿಗೆ ಕೈಜೋಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ಗೋಣಿಕೊಪ್ಪ ಅನುದಾನಿತ ಪ್ರೌಡಶಾಲೆ, ಸರ್ಕಾರಿ ಪ್ರೌಢಶಾಲೆ, ಬಿಳುಗುಂದ ಸರ್ಕಾರಿ, ಪೊನ್ನಂಪೇಟೆ ಸರ್ಕಾರಿ, ಕೊಂಡಂಗೇರಿ ಸರ್ಕಾರಿ, ಮಾಯಮುಡಿ ಸರ್ಕಾರಿ, ಕುಟ್ಟಂದಿ ಸರ್ಕಾರಿ, ಹಾತೂರು ಸರ್ಕಾರಿ, ಗೋಣಿಕೊಪ್ಪ ಸಂತ ಥೋಮಸ್, ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲೆ, ಪೊನ್ನಪ್ಪಸಂತೆ ಎಂಸಿಎಸ್, ಹುದಿಕೇರಿ ಜನತಾ ಪ್ರೌಢÀಶಾಲೆ, ಕುಮಟೂರು, ದೇವರಪುರ ರಾಜರಾಜೇಶ್ವರಿ, ಬಾಳೆಲೆ ವಿಜಯಲಕ್ಷ್ಮಿ ಹಾಗೂ ಅಮ್ಮತ್ತಿ ಪ್ರೌಢಶಾಲೆಗಳ ಅಧ್ಯಾಪಕರುಗಳು ಮಾದರಿ ಸ್ವೀಕರಿಸಿದರು.
ಈ ಸಂದರ್ಭ ಅನುದಾನಿತ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಪಿ.ಕೆ. ಚಿಣ್ಣಪ್ಪ, ಆಡಳಿತ ಮಂಡಳಿ ನಿರ್ದೇಶಕರುಗಳಾದ ನಾಮೇರ ರವಿ, ಕುಶಾಲಪ್ಪ, ಕುಪ್ಪಂಡ ಗಣೇಶ್ ಹಾಗೂ ವೆನಿಟರ್ ಸಂಸ್ಥೆ ಸಂಸ್ಥಾಪಕ ವಿಶ್ವನಾಥ್ ಉಪಸ್ಥಿತರಿದ್ದರು.