ದಾನಿಗಳ ಹಣದಿಂದಲೇ ತಲೆಯೆತ್ತಿರುವ ಶಾಲಾ ಕಟ್ಟಡ

ಮಡಿಕೇರಿ, ಅ. 22: ಧರ್ಮ ಗ್ರಂಥಗಳ ಪ್ರಕಾರ ದಾನದ ಬೆಲೆ ಗೊತ್ತಿಲ್ಲದವರಿಗೆ ಅಥವಾ ಅಪಾತ್ರರಿಗೆ ಯಾವ ಕಾರಣಕ್ಕೂ ದಾನ ನೀಡಲೇಬಾರದು - ಅಪಾತ್ರರಿಂದ ಏನೂ ಪಡೆಯಲು ಬಾರದು ಎಂಬ ಮಾತಿದೆ. ಇಂಥಹ ಹಿರಿಯರ ಮಾತಿಗೆ ಸಾಕ್ಷಿಯಾಗಿ ನಗರದಲ್ಲೊಂದು ಶಾಲಾ ಕಟ್ಟಡವಿದೆ.

ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮಡಿಕೇರಿ ನಗರಸಭೆಗೆ ಸುಸಜ್ಜಿತ ಶಾಲಾ ಕಟ್ಟಡವೊಂದನ್ನು ಕಟ್ಟಿಸಿಕೊಡಲಾಗಿದೆ. ಈ ಸುಂದರ ಕಟ್ಟಡವನ್ನು ಸರಿಯಾಗಿ ನಿರ್ವಹಿಸಿದ್ದರೆ ಇಂದು ಬೆಳ್ಳಿಹಬ್ಬ ಆಚರಿಸಬಹುದಿತ್ತು.

ಆದರೆ ನಮ್ಮ ನಗರಸಭೆಯ ನಿರ್ಲಕ್ಷ್ಯದಿಂದ ಒಂದು ಸುಂದರ ಶಾಲಾ ಕಟ್ಟಡ ಮಡಿಕೇರಿ ನಗರದ ಮಧ್ಯೆಯೇ ಇಂದು ಕಾಡುಪಾಲಾಗಿದೆ. ಓರ್ವ ದಾನಿಯು ತಮ್ಮ ಹಿರಿಯರ ಹೆಸರಿನಲ್ಲಿ ಕಟ್ಟಿಸಿಕೊಟ್ಟಿರುವ ಒಂದು ವಿದ್ಯಾ ದೇಗುಲವನ್ನೇ ಉಳಿಸಿಕೊಳ್ಳಲಾರದ ನಗರಸಭೆಯವರು ಬೇರೇನೂ ಉಳಿಸಿಯಾರು ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳಲಿದೆ.

ಈ ಕಟ್ಟಡಕ್ಕೆ ತಾ. 23.6.1991 ರಲ್ಲಿ ದಾನಿಗಳಾದ ಮಾತಂಡ ಕಾಮವ್ವ ಪೊನ್ನಪ್ಪ ಎಂಬವರು ಭೂಮಿಪೂಜೆ ನೆರವೇರಿಸಿದ್ದಾರೆ. ಆನಂತರದಲ್ಲಿ ಕೇವಲ ಎಂಟು ತಿಂಗಳ ಒಳಗಾಗಿ ದಾನಿಗಳ ಕನಸಿನ ವಿದ್ಯಾಲಯ ಕಟ್ಟಡ ತಲೆಯೆತ್ತುವದರೊಂದಿಗೆ 17.2.1992 ರಲ್ಲಿ ಉದ್ಘಾಟನೆಗೊಂಡಿದೆ.

ಮಾತಂಡ ಕಾಮವ್ವ ಎಂಬವರು ತಮ್ಮ ಹಿರಿಯರಾದ ಮಾತಂಡ ಚೀಯಣ್ಣ ಪೊನ್ನಪ್ಪ ಜ್ಞಾಪಕಾರ್ಥವಾಗಿ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದ್ದಾಗಿದೆ. ಆನಂತರದಲ್ಲಿ ಸ್ವರ್ಣ ಜಯಂತಿ ರೋಜ್‍ಗಾರ್ ಯೋಜನೆಯಡಿ ಈ ಕಟ್ಟಡಕ್ಕೆ ಹೊಂದಿಕೊಂಡಂತೆ 1999-2000ನೇ ಸಾಲಿನಲ್ಲಿ ಶೌಚಾಲಯ ಇತ್ಯಾದಿ ನಿರ್ಮಿಸಲಾಗಿದೆ.

ಮಾತ್ರವಲ್ಲದೆ ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಭೋಜನಗೃಹ ಕೂಡ ತಲೆಯೆತ್ತಿನಿಂತಿದೆ. ಇದರೊಂದಿಗೆ ಸುಸಜ್ಜಿತ ಕಟ್ಟಡ, ಕಬ್ಬಿಣದ ಬಾಗಿಲು ಸಹಿತ ವ್ಯವಸ್ಥೆ ರೂಪಿಸಲಾಗಿದೆ.

ಇಷ್ಟೆಲ್ಲ ವ್ಯವಸ್ಥೆಗಳ ನಡುವೆ ‘ದಿ. ಮಾತಂಡ ಚೀಯಣ್ಣ ಜ್ಞಾಪಕಾರ್ಥ ಶಾಲೆ’ಯೆಂಬ ಫಲಕವಿರುವ ಈ ಶಾಲಾ ಕಟ್ಟಡವಿಂದು ಸಂಪೂರ್ಣ ನಿರ್ಲಕ್ಷಿಸಲ್ಪಟ್ಟು ಕಾಡುಪಾಲಾಗಿರುವ ದೃಶ್ಯ ಎದುರಾಗಿದೆ.

ಇಂತಹ ಕಟ್ಟಡವೊಂದು ಸಂಪೂರ್ಣ ಕಾಡುಪಾಲಾಗಿರುವ ಸನ್ನಿವೇಶ ಯಾವದೋ ಹಳ್ಳಿಗಾಡಿನಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಿ ಹೋಗಿರುವ ಶಾಲೆಯ ಕಥೆಯಲ್ಲ. ಬದಲಾಗಿ ಇಲ್ಲಿನ ಐತಿಹಾಸಿಕ ರಾಜರ ಗದ್ದುಗೆಯ ಪ್ರವೇಶ ದ್ವಾರದ ಬಳಿಯೇ ಇದೆ.

ಈ ಶಾಲಾ ಕಟ್ಟಡ ಶೈಕ್ಷಣಿಕ ಚಟುವಟಿಕೆಗೆ ಬಳಕೆಯಾಗದಿರುವದು ಒಂದೆಡೆಯಾದರೆ, ಬಹುಶಃ ಅನಂತರದಲ್ಲಿ ಮತ್ತೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ಎರಡು ಶೌಚಾಲಯಗಳು ಮತ್ತು ನಾಲ್ಕಾರು ಮೂತ್ರಾಲಯಗಳನ್ನು ಕೂಡ ಮೇಲಿನ ಕಟ್ಟಡಕ್ಕೆ ಹೊಂದಿಕೊಂಡು ನಿರ್ಮಿಸಲಾಗಿದೆ. ಈ ಕಾಮಗಾರಿ ತೀರಾ ಇತ್ತೀಚೆಗೆ ನಡೆದಿರುವಂತಿದೆ.

ಅದು ಕೂಡ ಬಾಗಿಲುಗಳಿಗೆ ಬೀಗ ಜಡಿಯಲ್ಪಟ್ಟು ಕಳ್ಳದಾರಿಯಲ್ಲಿ ಅಕ್ರಮಗಳ ತಾಣವಾಗಿ ಪರಿವರ್ತನೆಗೊಂಡಿರುವ ಚಿತ್ರಣ ಎದುರಾಗಲಿದೆ. ಇಲ್ಲಿ ಕುಡುಕರು, ಮಾದಕ ವ್ಯಸನಿಗಳು ಭೂತ ಬಂಗಲೆಯಂತಿರುವ ಪರಿಸರವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ಕುರುಹುಗಳು ಗೋಚರಿಸಲಿವೆ. ಜನಸಾಮಾನ್ಯರ ತೆರಿಗೆ ಹಣದಿಂದ ಬೊಕ್ಕಸವನ್ನು ಬರಿದುಗೊಳಿಸಿ, ನಿರರ್ಥಕ ಕಾಮಗಾರಿಯ ಹೆಸರಿನಲ್ಲಿ ಏನೇನೋ ಲೆಕ್ಕ ತೋರಿಸುವ ಜವಾಬ್ದಾರಿಯುತರಿಗೆ ಇಂಥಹ ವ್ಯರ್ಥಗೊಂಡಿರುವ ಪರಿಸರ ಹಾಗೂ ಸ್ವತ್ತು ಕಾಣುವದೇ ಇಲ್ಲ. ಕಂಡರೂ ಜನೋಪಯೋಗಕ್ಕೆ ಬಳಕೆ ಮಾಡುವಷ್ಟು ಹೃದಯವಂತಿಕೆ ಇರುವದಿಲ್ಲ. ಕಾರಣ ಇದಾವದೂ ಇವರದಲ್ಲ. ಅದು ಸರಕಾರ ಅಥವಾ ನಗರಸಭೆಯದ್ದು.

ಆ ಮಾತ್ರದಿಂದ ಯಾರೋ ಜನಪ್ರತಿನಿಧಿ, ಯಾರೋ ತಾಂತ್ರಿಕ ಅಧಿಕಾರಿ, ಆತನಿಗೊಬ್ಬ ಪಾಲು ನೀಡುವ ಗುತ್ತಿಗೆದಾರ... ಹೀಗೆ ಪಾಲು ಬಂಡವಾಳ ಹಂಚಿಕೊಂಡರೆ ಅಲ್ಲಿಗೆ ಕೆಲಸ ಮುಗಿಯಿತು. ಇನ್ನು ಶಾಲಾ ಕಟ್ಟಡ ಇರಲಿ... ಶೌಚಾಲಯ... ಮತ್ಯಾವದೋ ಬಂಗಲೆಗಳು ಸರಕಾರದ ಅಥವಾ ದಾನಿಗಳಿಂದ ನೀಡಲ್ಪಟ್ಟ ಸ್ವತ್ತು ಬಿದ್ದು ಹೋದರೂ ಕಾಡುಪಾಲಾದರೂ ಯಾರಿಗೂ... ಏನೂ... ಅನಿಸುವದೇ ಇಲ್ಲ... ಅದುವೇ ನಮ್ಮ ವ್ಯವಸ್ಥೆ. ಇಲ್ಲಿ ಹೇಳುವವರೂ... ಕೇಳುವವರೂ... ಇರುವದೇ ಇಲ್ಲ!?

ಚಿತ್ರ ವರದಿ: ಟಿ.ಜಿ. ಸತೀಶ್.