ಭಾಗಮಂಡಲ, ಅ. 23: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ದೋಷ, ಸಮಸ್ಯೆಗಳಿದ್ದು, ಪರಿಹಾರ ಮಾಡುವ ನಿಟ್ಟಿನಲ್ಲಿ ಸಭೆ ನಡೆದು ಪರಿಹಾರೋಪಾಯಗಳ ಬಗ್ಗೆ ಚರ್ಚೆ ಮಾಡಲಾಯಿತು.ಸಂಘ ಪರಿವಾರದ ನೇತೃತ್ವದಲ್ಲಿ ಕ್ಷೇತ್ರದ ಕೈಲಾಸ ಆಶ್ರಮದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕೋಡಿ ಪೊನ್ನಪ್ಪ ಮಾತನಾಡಿ ಈ ಹಿಂದೆ ಜೀರ್ಣೋದ್ಧಾರ ಕಾರ್ಯ ಕೈಗೊಂಡ ಸಂದರ್ಭ ಋಷಿ ಮುನಿಗಳು ಪ್ರತಿಷ್ಠಾಪಿಸಿದ್ದ ಶಿವಲಿಂಗವನ್ನು ಮಣ್ಣಿನಡಿ ಹೂತು ಹಾಕಲಾಗಿದ್ದು, ಇದರಿಂದ ದೋಷ ಕಂಡುಬಂದಿದೆ. ಈ ನಿಟ್ಟಿನಲ್ಲಿ 3 ವರ್ಷದೊಳಗೆ ಪರಿಹಾರ ಮಾಡುವದಾಗಿ ವಾಗ್ದಾನ ನೀಡಲಾಗಿತ್ತು. ಇದೀಗ ಎರಡೂವರೆ ವರ್ಷ ಕಳೆದಿದ್ದು, ಮುಂದಿನ 6 ತಿಂಗಳಲ್ಲಿ ಪರಿಹಾರ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಇಂದು ಪೂರ್ವಭಾವಿ ಸಭೆ ಏರ್ಪಡಿಸಿರುವದಾಗಿ ತಿಳಿಸಿದರು.

ಎಂ.ಬಿ. ದೇವಯ್ಯ ಮಾತನಾಡಿ ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲಿ ಅನುದಾನ ಇದ್ದ ಸಂದರ್ಭ ಪರಿಹಾರ ಮಾಡುವ ಬಗ್ಗೆ ವಾಗ್ದಾನ ಕೊಟ್ಟಿದ್ದೆವು. ನಂತರದಲ್ಲಿ ಸಮಿತಿ ವಿಸರ್ಜನೆಯಾದ ಬಳಿಕ ಪರಿಹಾರ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಶಾಸಕರುಗಳಿಗೆ ತಿಳಿಸಿದ್ದೇವೆ. ಹಾಗಾಗಿ ಸಮಸ್ಯೆ, ತೊಂದರೆಗಳು ಕಂಡುಬರುತ್ತಿವೆ. ತಾಂಬೂಲ ಪ್ರಶ್ನೆಯಲ್ಲಿ ಪರಿಹಾರ ಮಾಡದಿದ್ದರೆ ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುವದಿಲ್ಲ. ಕಾವೇರಿ ನದಿ ಬತ್ತಿ ಹೋಗುವ ಸಾಧ್ಯತೆ ಇರುವ ಬಗ್ಗೆ ತಿಳಿದುಬಂದಿದೆ. ಹಾಗಾಗಿ ತುರ್ತಾಗಿ ಪರಿಹಾರ ಕಾರ್ಯ ಆಗಬೇಕಾಗಿದೆ ಎಂದರು.

ಸಂಘ ಪರಿವಾರದ ಪ್ರಮುಖ ತೊಡಿಕಾನದ ವಸಂತ ಭಟ್ ಮಾತನಾಡಿ ಪರಿಹಾರ ಕಾರ್ಯದಲ್ಲಿ ಕಾವೇರಿ ನದಿ ಹರಿಯುವ ಪ್ರದೇಶದ ಜನತೆ ಎಲ್ಲರೂ ಕೈ ಜೋಡಿಸಬೇಕು. ತಲಕಾವೇರಿ ಕ್ಷೇತ್ರ ಮುಜರಾಯಿ ಇಲಾಖೆಗೆ ಒಳಪಟ್ಟ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೊಡಗಿನಲ್ಲಿ ಜಾತಿ ವೈಷಮ್ಯ ಕಂಡುಬರುತ್ತಿದೆ. ಇದು ದೂರವಾಗಬೇಕೆಂದು ಹೇಳಿದರು.

ಅಗಸ್ತ್ಯೇಶ್ವರನಿಗೆ ಸಮರ್ಪಕವಾಗಿ ಪೂಜೆ ಆಗುತ್ತಿಲ್ಲ. ಇದರಿಂದ ಅಗಸ್ತ್ಯೇಶ್ವರ ಮುನಿಸಿಕೊಂಡಿದ್ದು, ಕಾವೇರಿ ದುಃಖಿತಳಾಗಿದ್ದಾಳೆ. ಪರಿಹಾರ ಆಗಬೇಕೆಂದರು.

ಸಂಘ ಪರಿವಾರದ ಮಂಗಳೂರು ವಿಭಾಗ ಕಾರ್ಯದರ್ಶಿ ಸೀತಾರಾಂ ತಲಕಾವೇರಿ ಕ್ಷೇತ್ರದ ದೋಷ, ಸಮಸ್ಯೆ ಬಗ್ಗೆ ಸ್ಥಳೀಯವಾಗಿ ಚರ್ಚೆ ಆಗಬೇಕು. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆಯಾಗಬೇಕೆಂದರು. ಮುಂದಿನ ಸಭೆಗೆ ಕಾವೇರಿ ನೀರು ಬಳಸುತ್ತಿರುವ ಪ್ರದೇಶದ ಪ್ರಮುಖರು ಹಾಗೂ ರಾಷ್ಟ್ರೀಯ ನಾಯಕರುಗಳನ್ನು ಕರೆ ತರಲಾಗುವದು. ತಮಿಳುನಾಡಿನ ಪ್ರಮುಖರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಎಲ್ಲರೊಡಗೂಡಿ ದೊಡ್ಡ ಪ್ರಮಾಣದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವದೆಂದರು.

ಸಾಮರಸ್ಯ ಇರಲಿ

ತುಲಾ ಸಂಕ್ರಮಣ ಜಾತ್ರೆ ಸಂದರ್ಭ ಭಾಗಮಂಡಲದಿಂದ ತಲಕಾವೇರಿಗೆ ಭಂಡಾರ ಕೊಂಡೊಯ್ಯುವ ಪದ್ಧತಿ ಈ ಹಿಂದಿನಿಂದಲೂ ಇದೆ. ಆದರೆ ಇದೀಗ ಕೇವಲ ಒಂದು ಸಮುದಾಯದವರು ಮಾತ್ರ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿರುವದು ಕಂಡು ಬರುತ್ತಿದೆ. ಈಗ ಒಂದು ಪವಿತ್ರ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಎಲ್ಲಾ ಸಮುದಾಯದವರಿಗೆ ಮಾಹಿತಿ ನೀಡುವಂತಾಗಬೇಕು. ಎಲ್ಲರೂ ಸಾಮರಸ್ಯದಿಂದ ಪಾಲ್ಗೊಳ್ಳುವಂತಾಗಬೇಕೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸಲಹೆಯಿತ್ತರು.

ಸಭೆಯಲ್ಲಿ ಪ್ರಮುಖರಾದ ಕೆ.ಎಸ್. ದೇವಯ್ಯ, ಸುಜಾ ಕುಶಾಲಪ್ಪ, ಸೂದನ ಈರಪ್ಪ, ಕೊಡಪಾಲು ಗಣಪತಿ, ಎಸ್.ಜಿ. ಮೇದಪ್ಪ, ಮಾಚಿಮಾಡ ರವೀಂದ್ರ, ರಾಬಿನ್ ದೇವಯ್ಯ ಇನ್ನಿತರರಿದ್ದರು. ಸಭೆಗೂ ಮುನ್ನ ಕ್ಷೇತ್ರದ ಪೌಳಿಯಲ್ಲಿ ಐಕ್ಯಮಂತ್ರ ಜಪ ಮಾಡಲಾಯಿತು.