ಸೋಮವಾರಪೇಟೆ,ಅ.22: ಇತ್ತೀಚಿನ ದಿನಗಳಲ್ಲಿ ಕೊಡಗಿನ ಜೀವನದಿ ಕಾವೇರಿ ಕಲುಷಿತಗೊಳ್ಳು ತ್ತಿದ್ದು, ಎಲ್ಲರೂ ಜಾಗೃತಿ ವಹಿಸಿ ನದಿಯನ್ನು ಉಳಿಸಬೇಕು. ಕಾವೇರಿ ನದಿ ಸಂರಕ್ಷಣೆ ಸಾಮಾಜಿಕ ಕರ್ತವ್ಯವಾಗಬೇಕು ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಹೇಳಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಕಾವೇರಿ ತುಲಾ ಸಂಕ್ರಮಣ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಪರಿಸರದ ಮೇಲೆ ಕೆಲವರಿಂದಾ ಗುತ್ತಿರುವ ನಿರಂತರ ಧಾಳಿಯಿಂದ ನಾವು ಉಸಿರಾಡುವ ಗಾಳಿ, ಕುಡಿ ಯುವ ನೀರು ಕಲುಷಿತ ಗೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಕಾಲ ಕಾಲಕ್ಕೆ ಮಳೆ ಬೆಳೆಯಾಗುತ್ತಿಲ್ಲ. ಪ್ರಜ್ಞಾವಂತ ನಾಗರಿಕರು ಮುಂದಿನ ಪೀಳಿಗೆಗೂ ಉತ್ತಮ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದು ರವೀಂದ್ರ ಅವರು ಅಭಿಪ್ರಾಯಿಸಿದರು.

ಜಲಮೂಲಗಳು ಕಲುಷಿತ ಗೊಳ್ಳುವದನ್ನು ತಡೆಯಬೇಕಿದೆ. ಅಂತÀರ್ಜಲವನ್ನು ಕಾಪಾಡುವ ನೀಟ್ಟಿನಲ್ಲಿ ಬತ್ತಿಹೋದ ಕೆರೆಗಳನ್ನು ಪುನಶ್ಚೇತನಗೊಳಿಸಿ ನದಿ ಮೂಲಗಳನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಯಡೂರು ಗ್ರಾಮಸ್ಥರ ನೆರವಿನೊಂದಿಗೆ ಸ್ಥಳೀಯ ಕೆರೆಯ ಹೂಳೆತ್ತುವ ಕಾರ್ಯ ಮಾಡಲಾಗುವದು. ಅಲ್ಲದೆ, ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆನೆಕೆರೆಗೆ ಮರು ಜೀವ ನೀಡುವ ಕೆಲಸ ಮಾಡಲಾಗುವದು ಎಂದು ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಕಾವೇರಿ ಸಂಕ್ರಮಣದದಂದು ನಡೆಯುವ ತೀರ್ಥೋದ್ಭವ ನಂತರ ತಲಕಾವೇರಿಯಿಂದ ತೀರ್ಥವನ್ನು ತಂದು ನಾಡಿನ ಜನತೆಗೆ ಹಂಚುವ ಕಾರ್ಯವನ್ನು ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘ ಮಾಡುತ್ತಿರುವದು ಶ್ಲಾಘನೀಯ. ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವವರ ಬೆನ್ನು ತಟ್ಟುವ ಕೆಲಸವಾಗಬೇಕಿದೆ. ತಾವು ಬದುಕಿದ್ದ ಅವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಸಮಾಜಕಟ್ಟುವ ಕೆಲಸವನ್ನು ಸರ್ವರೂ ಮಾಡಬೇಕೆಂದರು.

ವೇದಿಕೆಯಲ್ಲಿ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಪುಷ್ಪಗಿರಿ ದೇವಾಲಯ ಸಮಿತಿ ಅಧ್ಯಕ್ಷ ಚಂಗಪ್ಪ, ಮೋಟಾರು ಚಾಲಕರು ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷ ಸಿ.ಸಿ. ನಂದ, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ, ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಸಮಿತಿ ಸದಸ್ಯ ಎಸ್.ಸಿ. ಪೂಣಚ್ಚ, ತಾಲೂಕು ಘಟಕದ ಅಧ್ಯಕ್ಷ ಬಿ.ಈ. ಜಯೇಂದ್ರ, ಪತ್ರಕರ್ತರ ಸಂಘದ ತಾಲೂಕು ಕಾರ್ಯದರ್ಶಿ ಬಿ.ಎ. ಭಾಸ್ಕರ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಆಟೋ ಚಾಲಕರ ಸಂಘದ ಜಿಲ್ಲಾ ಸಮಿತಿ ಸದಸ್ಯ ಹಸನಬ್ಬ, ಸ್ಥಳೀಯರಾದ ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಹುಣಸೂರಿನ ಪ್ರಿಯಾ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.