ಶ್ರೀಮಂಗಲ, ಅ. 22: ಕೊಡವ ಸಂಸ್ಕøತಿಯನ್ನು ಅನಾವರಣಗೊಳಿಸುವ ಪಲ್‍ಂಬು, ಮುಕ್ಕಾಲಿ, ತಳಿಯತ್ ಅಕ್ಕಿ ಬೊಳ್‍ಚ, ಪೋಳಿಯ, ತೊಮ್ಮಡ, ತೋಕ್, ಒಡಿಕತ್ತಿ, ಕದ್ ಎಡ್‍ಪ ಕುತ್ತಿ, ಕೊಯಿಕತ್ತಿ ಸೇರಿದಂತೆ ವಿವಿಧ ಪರಿಕರಗಳನ್ನೊಳಗೊಂಡ ಕೊಡವ ಪದ್ಧತಿ-ಸಂಸ್ಕøತಿಯ ವಸ್ತುಗಳನ್ನು ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ವಾಲಗಕ್ಕೆ ನೃತ್ಯ ರೂಪಕದಂತೆ ಹೆಜ್ಜೆ ಹಾಕಿದ ಶ್ರೀಮಂಗಲ ಜೆ.ಸಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ನೃತ್ಯ ಹಾಗೂ ಚಿತ್ರಕಲಾವಿದ ಬಿ.ಆರ್. ಸತೀಶ್ ಅವರ ಸ್ಥಳದಲ್ಲೇ ನೃತ್ಯ ಹಾಗೂ ಹಾಡಿಗೆ ಸರಿಯಾಗಿ ಚಿತ್ರ ಬಿಡಿಸುವ ಕೈಚಳಕ ನೆರೆದಿದ್ದ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಟಿ. ಶೆಟ್ಟಿಗೇರಿಯ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಮತ್ತು ಸಾಂಸ್ಕøತಿಕ ಸಂಸ್ಥೆ, ಸಾರ್ವಜನಿಕ ಗೌರಿ ಗಣೇಶ ಸೇವಾ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಚಂಗ್ರಾಂದಿ-ಪತ್ತಾಲೋದಿ ಜನೋತ್ಸವದ ನಾಲ್ಕನೇ ದಿನ ಅದ್ಬುತ ಸಾಂಸ್ಕøತಿಕ ವೈಭವ ಜನಮನ ಗೆದ್ದಿತು.

ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕೊಡವ ಸಂಸ್ಕøತಿಯ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ, ಪ್ರೋತ್ಸಾಹಕ ಬಹುಮಾನ ಕಲಾವಿದರಲ್ಲಿ ಮತ್ತಷ್ಟು ಹುರುಪು ಮೂಡಿಸುತ್ತಿತ್ತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮ ಪ್ರಾಯೋಜನೆಗೆ ಸಹಾಯ ನೀಡಿದ ಚೆಟ್ಟಂಗಡ ಅರಸು ಅಚ್ಚಪ್ಪ ಮಾತನಾಡಿ, ಇದುವರೆಗೆ ಯಾರೂ ಮಾಡದ ಚಂಗ್ರಾಂದಿ-ಪತ್ತಾಲೋದಿ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಯೋಜಿಸಿದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ಹಾಗೂ ಸಹಕರಿಸಿದ ಇತರ ಸಂಸ್ಥೆಗಳ ಸಾಧನೆಯನ್ನು ಪ್ರಶಂಶಿಸಿದರು ಎಲ್ಲಾ ಕೊಡವ ಸಮಾಜದಿಂದ ಈ ರೀತಿಯ ಆಚರಣೆಯಾದರೆ ಕೊಡವ ಸಂಸ್ಕøತಿ ಉಳಿಯುತ್ತದೆ. ಕೊಡವ ಸಂಸ್ಕøತಿಯ ಪ್ರತಿಯೊಂದು ಕಾರ್ಯಕ್ರಮಕ್ಕೂ ಎಲ್ಲರೂ ಪದ್ಧತಿಯ ಉಡುಪಿನಲ್ಲಿ ಬರಬೇಕು ಈ ರೀತಿಯ ಸಾಂಸ್ಕøತಿಕ ಚಟುವಟಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದರೆ ಪ್ರತಿಭೆ ಅನಾವರಣಗೊಳ್ಳುವದರೊಂದಿಗೆ ಮುಂದಿನ ಪೀಳಿಗೆಗೆ ಕಲಿಸಿಕೊಟ್ಟಂತೆ ಆಗುತ್ತದೆ ಎಂದರು.

ಮತ್ತೋರ್ವ ಅತಿಥಿ ಕಟ್ಟೇರ ದಾದು ಉತ್ತಯ್ಯ ಮಾತನಾಡಿ ರಂಗುರಂಗಿನ ಕಾರ್ಯಕ್ರಮ ನೋಡಲು ದಿನದಿಂದ ದಿನಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದು ಕೊಡವ ಸಂಸ್ಕøತಿಯ ಮೇಲೆ ಜನರಿಗೆ ಇರುವ ಅಭಿಮಾನವನ್ನು ತೋರಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆತಂದು ತೋರಿಸಿದರೆ ಮುಂದಿನ ದಿನಗಳಲ್ಲಿ ಕೊಡವ ಪದ್ಧತಿ, ಸಂಸ್ಕøತಿ ಕಲೆಯನ್ನು ಮೈಗೂಡಿಸಿ ಕೊಳ್ಳಲು ಮಕ್ಕಳಿಗೆ ಸಹಕಾರಿಯಾಗುತ್ತದೆ ಎಂದರು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣರವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ನೂರೆರ ಕಾಶಿ ದೇವಯ್ಯ, ಚೆಟ್ಟಂಗಡ ಕಸ್ತೂರಿ ಅಚ್ಚಪ್ಪ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಇಂದಿನ ಕಾರ್ಯಕ್ರಮ: ಇಂದು ಸಂಜೆ 4 ಗಂಟೆಗೆ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ “ಬ್ರಹ್ಮತೀರ್ಥ” ನಾಟಕ ಪದರ್ಶನಗೊಳ್ಳಲಿದೆ.