*ಗೋಣಿಕೊಪ್ಪಲು, ಅ. 23 : ದೇವಸ್ಥಾನ, ಮಠ ಮಂದಿರ, ಮಸೀದಿ, ಚರ್ಚುಗಳು ನಮಗೆ ಬೇಡ, ದುಡಿದು ತಿನ್ನಲು ಭೂಮಿ ಕೊಡಿ ಎಂಬ ಕೂಗಿನೊಂದಿಗೆ ಆದಿವಾಸಿ ಮಹಾಸಭಾ ದಲಿತ ಸಂಘರ್ಷ ಸಮಿತಿ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಪೆÇನ್ನಂಪೇಟೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.

ಪೆÇನ್ನಂಪೇಟೆ ಬಸ್ ನಿಲ್ದಾಣದಿಂದ ತಾ.ಪಂ. ಕಚೇರಿ ಯವರೆಗೆ ಮೆರವಣಿಗೆ ನಡೆಸಿ ನೂರಾರು ನಿವೇಶನ ರಹಿತರು ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

ಸ್ವಾತಂತ್ರ್ಯಬಂದು 70 ವರ್ಷಗಳು ಕಳೆದರೂ ಆದಿವಾಸಿಗಳ ಬದುಕು ಹಸನಾಗಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ನಮ್ಮನ್ನು ತುಳಿಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹಾಗೂ ತಾ.ಪಂ, ಜಿ.ಪಂ. ಸದಸ್ಯರುಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು. ಮುಂದಿನ ಎರಡು ತಿಂಗಳ ಒಳಗೆ ನಿವೇಶನ ರಹಿತರಿಗೆ ಭೂಮಿ ಹಂಚಿಕೆ ಮಾಡದಿದ್ದರೆ ದಿಡ್ಡಳ್ಳಿ ಪ್ರತಿಭಟನೆಯ ಮಾರ್ಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಈ ಸಂದರ್ಭ ಸಂಘಟಕ ರಮೇಶ್ ಎಚ್ಚರಿಸಿದರು.

ವಿದ್ಯಾರ್ಥಿ ದಲಿತ ಸಂಘರ್ಷ ಸಂಘಟನಾ ಸಂಚಾಲಕ ಸತೀಶ್ ಮಾತನಾಡಿ ನೋವು, ಶೋಷಣೆಗೆ ಜಿಲ್ಲೆಯ ಆದಿವಾಸಿಗಳು ಒಳಗಾಗುತ್ತಿ ದ್ದಾರೆ. ಶಿಕ್ಷಣ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿ ರುವ ಆದಿವಾಸಿಗಳಿಗೆ ಅಧಿಕಾರಿಗಳು ಹಾಗೂ ರಾಜಕಾರಣಿ ಗಳು ಯಾವದೇ ಸೌಕರ್ಯ ನೀಡುತ್ತಿಲ್ಲ. ಆದಿವಾಸಿ ಗಳನ್ನು ನಿರಂತರವಾಗಿ ತುಳಿಯುವ ಕಾರ್ಯ ನಡೆಯುತ್ತಿದೆ. ಇಂದಿಗೂ ಗಿರಿಜನರು ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಜೀತ ಪದ್ಧತಿಯಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದಿವಾಸಿಗಳಿಗೆ ಉತ್ತಮ ಶಿಕ್ಷಣ, ಆರೋಗ್ಯ ನೀಡುವಲ್ಲಿ ವಿಫಲತೆಯನ್ನು ಕಾಣುತ್ತಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಪರಿಶಿಷ್ಟ ವರ್ಗದವರಿಗೆ ಮೂಲಭೂತ ಸೌಕರ್ಯ ನೀಡುತ್ತಿಲ್ಲ. ತಮ್ಮ ಹಕ್ಕನ್ನು ಪಡೆಯುವ ಸ್ವಾತಂತ್ರ್ಯವೂ ದೊರೆತಿಲ್ಲ. ಸಂವಿಧಾನವನ್ನು ಅಂಬೇಡ್ಕರ್ ರಚನೆ ಮಾಡಿದರೂ ದಲಿತರಿಗೆ ಹಿಂದಿಗೂ ಮೂಲಭೂತ ಸೌಕರ್ಯಗಳು ನೀಡುವಲ್ಲಿ ಸರ್ಕಾರ ಎಡವಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು.

ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಮೇಶ್ ಮಾತನಾಡಿ ಬುಡಕಟ್ಟು ಆದಿವಾಸಿ ಜನಾಂಗದ ವರಿಗೆ ನಿವೇಶನ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಭ್ರಷ್ಟ ಅಧಿಕಾರಿಗಳ ಕಾರ್ಯ ನಿರ್ವಹಣೆಯೇ ಈ ಪರಿಸ್ಥಿತಿಗೆ ಮೂಲ ಕಾರಣವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಇಂದಿಗೂ ನಿವೇಶನ ರಹಿತರು ಜಿಲ್ಲೆಯಲ್ಲಿ ಇದ್ದಾರೆ ಎಂದರೆ ನಾಚಿಕೆ ತರುವ ವಿಚಾರ ವಾಗಿದೆ; ಇದು ಜಿಲ್ಲಾಡಳಿತ ತಲೆ ತಗ್ಗಿಸುವ ವಿಚಾರ ಎಂದು ಹೇಳಿದರು.

ನಿವೇಶನ ರಹಿತರಿಗೆ ಕೂಡಲೇ ನಿವೇಶನ ಹಂಚಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಕಾರ್ಯ ನಿರ್ವಹಣಾಧಿ ಕಾರಿ ನಿವೇಶನ ರಹಿತರಿಗೆ 90.60 ಎಕರೆ ಜಾಗವನ್ನು ಮೀಸಲಾಗಿರಿಸಿದ್ದು, ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು, ಬಿರುನಾಣಿ, ಬೇಟೋಳಿ ಹಾಗೂ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು, ಹೆಬ್ಬಾಲೆ ಮತ್ತು ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಕಾಯ್ದಿರಿಸಲಾಗಿದೆ. ನಿವೇಶನಕ್ಕಾಗಿ 721 ಅರ್ಜಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ನೀಡಲಾಗಿದೆ. ಅರ್ಜಿ ಪರಿವೀಕ್ಷಣೆ ಕಾರ್ಯ ನಡೆಯುತ್ತಿದ್ದು, ಸದ್ಯದಲ್ಲೇ ನಿವೇಶನ ಹಂಚಿಕೆ ಕಾರ್ಯ ನಡೆಯಲಿದೆ ಎಂದರು. ಈ ಸಂದರ್ಭ ಅಧಿಕಾರಿಗಳು ಮನ ಒಲಿಸಿದ ಕಾರಣ ಪ್ರತಿಭಟನೆಯನ್ನು ಪ್ರತಿಭಟನಾಕಾರರು ಹಿಂಪಡೆದರು. ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೃಷ್ಣಪ್ಪ, ರಜಿನಿಕಾಂತ್, ತಾಲೂಕು ಕಟ್ಟಡ ಕಾರ್ಮಿಕ ಸಂಘಟನಾ ಸಂಚಾಲಕ ಮೋಹನ್ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತಾಲೂಕು ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ತಾಲೂಕು ಹಿಂದುಳಿದ ವರ್ಗಗಳ ಜಾಲಿ ಹಾಗೂ ಎ.ಎಸ್.ಐ. ಹೆಚ್. ವೈ. ಚಂದ್ರ ಸಮಸ್ಯೆಗಳನ್ನು ಆಲಿಸಿದರು.