ಗೋಣಿಕೊಪ್ಪಲು, ಅ. 22: ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಫ್ಲೋರ್‍ಬಾಲ್ ಅಸೋಸಿಯೇಷನ್, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ 3 ನೇ ವರ್ಷದ ರಾಜ್ಯಮಟ್ಟದ ಪದವಿಪೂರ್ವ ಬಾಲಕ, ಬಾಲಕಿಯರ ಫ್ಲೋರ್‍ಬಾಲ್ ಕ್ರೀಡಾಕೂಟದ ಬಾಲಕರಲ್ಲಿ ಕೊಡಗು, ಬಾಲಕಿಯರಲ್ಲಿ ಮೈಸೂರು ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಟೂರ್ನಿಯ ಬಾಲಕರ ಅಂತಿಮ ಪಂದ್ಯದಲ್ಲಿ ಕೊಡಗು ತಂಡವು ಬೆಂಗಳೂರು ಉತ್ತರ ತಂಡದ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೆಂಗಳೂರು ಉತ್ತರ ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಕೊಡಗು ಪರ ಗೋಣಿಕೊಪ್ಪ ಕಾವೇರಿ ಕಾಲೇಜುವಿನ ಆಟಗಾರರು ಪ್ರತಿನಿಧಿಸಿದರು. ಕೊಡಗು ಪರವಾಗಿ ಸೋಮಣ್ಣ, ರೋಹಿತ್, ರಾಮು, ಬೆಂಗಳೂರು ಪರ ಉಜ್ವಲ್ ಗೋಲು ಹೊಡೆದರು. ಬಾಲಕಿಯರಲ್ಲಿ ಮೈಸೂರು ತಂಡವು ಕೊಡಗು ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಮೈಸೂರು ಪರ ಪೂಜಿತಾ, ಯಶಿಕ, ಅಂಜಲಿ ತಲಾ ಒಂದೊಂದು ಗೋಲು ಹೊಡೆದು ಮಿಂಚಿದರು. ಕೊಡಗು ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಕೊಡಗು ತಂಡದ ರಾಮು ಹಾಗೂ ಬಾಲಕಿಯರಲ್ಲಿ ಮೈಸೂರು ತಂಡದ ಅಂಜಲಿ ಪಡೆದುಕೊಂಡರು.

ಸಮಾರೋಪದಲ್ಲಿ ಫ್ಲೋರ್‍ಬಾಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮಿನ್ನಂಡ ಜೋಯಪ್ಪ, ವೀಕ್ಷಕ ಹಜಾರೆ, ಫ್ಲೋರ್‍ಬಾಲ್ ಆಯ್ಕೆ ಸಮಿತಿ ಅಧ್ಯಕ್ಷ ತಿಪ್ಪಣ್ಣ, ಹಾಗೂ ಪಿಯು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ದೈಹಿಕ ನಿರ್ದೇಶಕರುಗಳಾದ ಎಂ.ಟಿ. ಸಂತೋಷ್, ಡಾ. ದೇಚಮ್ಮ, ದಾನಿ ಉಂಬೈ, ಬಿಜೆಪಿ ಪ್ರಮುಖರಾದ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಉಪಸ್ಥಿತರಿದ್ದರು.