ದೇವಕಿ ಗಣಪತಿ
ಮಡಿಕೇರಿ, ಅ. 22: ಕೊಡಗಿನ ಕಾಳಿದಾಸ ಎಂದು ಕರೆಸಿಕೊಂಡ ಹರದಾಸ ಅಪ್ಪಚ್ಚಕವಿಗೆ 50-60ನೇ ದಶಕದಲ್ಲಿ ಡಾ. ಐ.ಮಾ. ಮುತ್ತಣ್ಣ ಮರುಹುಟ್ಟು ನೀಡಿದ್ದರೆ, 90ನೇ ದಶಕದ ಈಚೆಗೆ ಕವಿಯನ್ನು ರಂಗಭೂಮಿಯಲ್ಲಿ ಶ್ರೀಮಂತ ಗೊಳಿಸಿದವರು ಅಡ್ಡಂಡ ಕಾರ್ಯಪ್ಪ ಎಂದು ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಉಪಾಧ್ಯಕ್ಷೆ ಬಲ್ಯಮಾಡ ದೇವಕಿ ಗಣಪತಿ ನುಡಿಯಾಡಿದರು.
ರಂಗಭೂಮಿ ದಂಪತಿಗಳಾದ ಅಡ್ಡಂಡ ಕಾರ್ಯಪ್ಪ ಮತ್ತು ಅನಿತ ಕಾರ್ಯಪ್ಪ ಪೊನ್ನಂಪೇಟೆಯ ತಮ್ಮ ಮನೆಯಂಗಳದಲ್ಲಿ ಏರ್ಪಡಿಸಿದ ಕವಿಯ 150ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ದೇವಕಿ ಗಣಪತಿ ಮಾತನಾಡಿದರು. 1994 ರಲ್ಲಿ ಕವಿಯ 125ನೇ ಜನ್ಮೋತ್ಸವ ಆಚರಿಸಿದಾಗ ಅಂದಿನ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಎ.ಸಿ. ಕಾರ್ಯಪ್ಪ ಕವಿಯ ನೆನಪಿಗೆ ಅಪ್ಪಚ್ಚಕವಿ ವಿದ್ಯಾಲಯ ಸ್ಥಾಪಿಸಿದರು. ಆಗ ಅಂದಿನ ಆಡಳಿತ ಮಂಡಳಿಯಲ್ಲಿದ್ದು ಇದಕ್ಕೆ ಸಾಕ್ಷಿಯಾಗಿದೆ. ಒಂದು ಕಡೆ ಕವಿಯ ಪರಿಚಯವನ್ನು ನಾಟಕ ರೂಪದಲ್ಲಿ ಪ್ರದರ್ಶಿಸುತ್ತಾ ಜನಮನದಲ್ಲಿ ಕವಿಯ ಬದುಕು-ಸಾಹಿತ್ಯವನ್ನು ಪರಿಣಾಮಕಾರಿಯಾಗಿ ತಂದ ಸಾಧನೆ ಇವರದ್ದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಕೂರ್ಗ್ ಫೌಂಡೇಶನ್ ಪಾಲಿಬೆಟ್ಟದ ಮಾಜಿ ನಿರ್ದೇಶಕ ಕಾಕಮಾಡ ಚಂಗಪ್ಪ ಮಾತನಾಡಿ, ಹೊರಗೆ ವೃತ್ತಿ ಜೀವನ ಆರಂಭಿಸಿ ಕೊಡಗಿಗೆ ಬಂದ ತನಗೆ ಅಪ್ಪಚ್ಚ ಕವಿಯ ವಿಷಯದಲ್ಲಿ ಏನೇನು ಗೊತ್ತಿರಲಿಲ್ಲ. ಆದರೆ ಕಾರ್ಯಪ್ಪ ರಂತಹ ರಂಗಭೂಮಿ ಕಲಾವಿದರು ಕವಿಯ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ನಾನು ಕೂಡ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗುವಂತಾಯಿತು ಎಂದರು. ಕಾರ್ಯಕ್ರಮದಲ್ಲಿ ಅಣ್ಣಳಮಾಡ ದೇವಯ್ಯ ಮತ್ತು ಮರಾಡ ಪೂವಮ್ಮ ನಂಜಪ್ಪ ಮಾತನಾಡಿ, ಇದೊಂದು ಹೃದಯ ಸ್ಪರ್ಶಿ ಕಾರ್ಯಕ್ರಮ ಎಂದರು.
ವಿದ್ಯೆಗೆ ಸಂಕೇತವಾದ ಅಪ್ಪಚ್ಚಕವಿಯ ನೆನಪಿನಲ್ಲಿ ಆ ಭಾಗದ 21 ನಿವೃತ್ತ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಕವಿಯ ಬದುಕು ಸಾಹಿತ್ಯವನ್ನು ಹರಿಕಥಾ ರೂಪದಲ್ಲಿ “ಅಮರ ಕಾವ್ಯ” ಎಂಬ ಕಥಾನಕವನ್ನು ಕಾರ್ಯಪ್ಪ ಮತ್ತು ಮದ್ರಿರ ಸಂಜು ನಡೆಸಿಕೊಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದರು.
ಸಮಾರಂಭದಲ್ಲಿ ಚೇಂದಿರ ನಿರ್ಮಲ ಬೋಪಣ್ಣ ಪ್ರಾರ್ಥಿಸಿ, ಅನಿತ ಕಾರ್ಯಪ್ಪ ಸ್ವಾಗತಿಸಿ, ವಂದಿಸಿದರು.