ಮಡಿಕೇರಿ, ಅ. 22: ನಗರದ ಸಂತ ಮೈಕಲರ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಾರ್ಷಿಕೋತ್ಸವದ ಅಂಗವಾಗಿ ಕಳೆದ 3 ದಿನಗಳಿಂದ ಭಕ್ತಾದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿದ್ಧತೆ ನಡೆಸಿದ್ದರು. ಭಾನುವಾರ ಸಂಜೆ 5 ಗಂಟೆಗೆ ಆಡಂಬರದ ಸಾಂಭ್ರಮಿಕ ಗಾಯನ ಬಲಿಪೂಜೆಯೊಂದಿಗೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕೊಡಗು ವಲಯದ ಶ್ರೇಷ್ಠ ಗುರುಗಳಾದ ಸ್ವಾಮಿ ಮೊದಲೈ ಮುತ್ತು ದಿವ್ಯ ಬಲಿಪೂಜೆಯನ್ನು ಅರ್ಪಿಸಿ ದರು. ಕೊಡಗು ಮತ್ತು ಮೈಸೂರು ಧರ್ಮ ಪ್ರಾಂತ್ಯದ ವಿವಿಧ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.

ಬಲಿಪೂಜೆಯ ಬಳಿಕ ಸಂತ ಮೈಕಲರ ಸ್ವರೂಪವನ್ನು ಹೊತ್ತ ಅಲಂಕೃತ ತೇರಿನ ಮೆರವಣಿಗೆಯನ್ನು ಮಡಿಕೇರಿ ನಗರದ ಪ್ರಮುಖ ಬೀದಿಯಲ್ಲಿ ನಡೆಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಮೇಣದ ಬತ್ತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ರಾತ್ರಿ ಭಕ್ತಾದಿಗಳಿಗೆ ಸಹಬೋಜನ ವನ್ನು ಏರ್ಪಡಿಸಲಾಗಿತ್ತು.