ಸಿದ್ದಾಪುರ, ಅ. 23: ಚೆನ್ನಯ್ಯನಕೋಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸಾಗರ್ ತಂಡ, ಸಾಗರ್ ಲೆಜೆಂಡ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಳೆದ 3 ದಿನಗಳಿಂದ ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾರತ್ ಟೈಗರ್ಸ್ ವತಿಯಿಂದ ನಡೆದ ಪ್ರಥಮ ವರ್ಷದ ಸಿ.ಪಿ.ಎಲ್ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದು, ಫÉೈನಲ್ ಹಂತಕ್ಕೆ ಸಾಗರ್ ಹಾಗೂ ಸಾಗರ್ ಲೆಜೆಂಡ್ಸ್ ತಂಡ ತಲುಪಿತ್ತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ಯುವ ಶಕ್ತಿಯು ದೇಶದ ಶಕ್ತಿಯಾಗಿದ್ದು, ಕ್ರೀಡೆಯಿಂದ ಸೌಹಾರ್ದತೆಯನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೊಕೇಶ್ ಮಾತನಾಡಿ, ಯುವಕರು ಕ್ರೀಡಾ ಕೂಟದಲ್ಲಿ ಭಾಗವಹಿಸಿ, ಕ್ರೀಡಾ ಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಲು ಕರೆನೀಡಿದರು.

ಈ ಸಂದರ್ಭ ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಗ್ರಾ.ಪಂ. ಅಧ್ಯಕ್ಷೆ ಗೀತಾ, ಸಂಘದ ಅಧ್ಯಕ್ಷ ಕೆ.ಜಿ. ರತೀಶ್, ವಲಯ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯೊಗೇಶ್, ಮುಸ್ತಫ ಸೇರಿದಂತೆ ಇನ್ನಿತರರು ಇದ್ದರು.

ಪಂದ್ಯಾವಳಿಯ ಉತ್ತಮ ತಂಡ ಚೆನ್ನಂಗಿಯ ಕಾವೇರಿ ಬಾಯ್ಸ್, ಉತ್ತಮ ಹೊಡೆತಗಾರ ಅನೀಶ್, ಉತ್ತಮ ಎಸೆತಗಾರ ರಫೀಕ್, ಉತ್ತಮ ನಾಯಕ ಪ್ರವೀಣ್, ಪಂದ್ಯಾವಳಿಯ ಆಕರ್ಷಕ ಆಟಗಾರ ವಿನ್ಸೆಂಟ್, ಉತ್ತಮ ಆಟಗಾರ ನವೀನ್, ಯುವ ಆಟಗಾರ ಆಶಿಕ್, ಪಂದ್ಯ ಪುರುಷೋತ್ತಮ ಹಾಗೂ ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಸುರೇಶ್ ಹೊಸೋಕ್ಲು ಪಡೆದುಕೊಂಡರು.