ಮಡಿಕೇರಿ, ಅ. 22: ಏಷ್ಯನ್ ಹಾಕಿ ಫೆಡರೇಷನ್ (ಎಎಚ್‍ಎಫ್) ವತಿಯಿಂದ ಜಪಾನ್‍ನ ಕಾಕಮಿಗಹಾರ ದಲ್ಲಿ ತಾ. 28 ರಿಂದ ನವೆಂಬರ್ 5ರವರೆಗೆ ನಡೆಯಲಿರುವ 9ನೇ ಮಹಿಳಾ ಏಷ್ಯಾ ಕಪ್ - 2017ರಲ್ಲಿ ಪಾಲ್ಗೊಳ್ಳಲಿರುವ ಭಾರತ ಮಹಿಳಾ ಹಾಕಿ ತಂಡದ ಟೆಕ್ನಿಕಲ್ ಜಡ್ಜ್ ಆಗಿ ಕೊಡಗಿನವರಾದ ಪುಳ್ಳಂಗಡ ರೋಹಿಣಿ ಬೋಪಣ್ಣ ಅವರು ಹಾಕಿ ಇಂಡಿಯಾ ದಿಂದ ನೇಮಕ ಗೊಂಡಿದ್ದಾರೆ. ಈ ಹಿಂದೆ ರೋಹಿಣಿ ಬೋಪಣ್ಣ ಅವರು 2016ರಲ್ಲಿ ಗುವಾಹಟಿಯಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್, ಸಿಂಗಪುರದಲ್ಲಿ ನಡೆದ 4ನೇ ಮಹಿಳಾ ಏಷ್ಯನ್ ಚಾಂಪಿಯನ್‍ಶಿಪ್ ಸೇರಿದಂತೆ ಇನ್ನೂ ಹಲವಾರು ಪಂದ್ಯಾವಳಿ ಗಳಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇವರು ಮೂಲತಃ ಬೆಸಗೂರಿನವರಾದ ಅಂತರ ರಾಷ್ಟ್ರೀಯ ಗೋಲ್ ಕೀಪರ್ ಪುಳ್ಳಂಗಡ ಬೋಪಣ್ಣ ಅವರ ಪತ್ನಿ.