ಶನಿವಾರಸಂತೆ, ಅ. 22: ಕೊಡ್ಲಿಪೇಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟಿಸಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‍ನಡಿಯಲ್ಲಿ ವಾರ್ಷಿಕ 50 ಕೋಟಿ ರೂಪಾಯಿಗಳ ಅನುದಾನ ನೀಡಿದೆ. ಅಭಿವೃದ್ಧಿಯೂ ಆಗಿದೆ. ರಾಜ್ಯ ಸರಕಾರದಿಂದ ಬಂದ ಅನುದಾನದಿಂದ ಶಾಸಕರು ಭೂಮಿಪೂಜೆ ಮಾಡುತ್ತಾ ಸರಕಾರ ಏನೂ ಮಾಡಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಂತಹ ಯಾರಿಗೆ ಟಿಕೇಟ್ ನೀಡಿದರೂ ನಾವು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವದರ ಮೂಲಕ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಮುಖಂಡ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಲ್ಲಾ ಜನಾಂಗದವರ ಅಭಿವೃದ್ಧಿಗೆ ಶ್ರಮವಹಿಸುವ ಮೂಲಕ ಪ್ರಣಾಳಿಕೆಯಲ್ಲಿ ನೀಡಿದಂತೆ 170 ಭರವಸೆಗಳಲ್ಲಿ 160ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿ ಜನಪರ ಆಡಳಿತವನ್ನು ನೀಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ನಡೆದ ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ ಅಭಿಯಾನಕ್ಕೆ ಚಾಲನೆ ನೀಡಿದ ಲೋಕೇಶ್ ಕುಮಾರ್ ಹಾಗೂ ಚಂದ್ರಮೌಳಿ ನೇತೃತ್ವದಲ್ಲಿ ಕೊಡ್ಲಿಪೇಟೆ ನಗರ ವ್ಯಾಪ್ತಿಯಲ್ಲಿ ಸಂಚರಿಸಿ ಸರಕಾರದ ಸಾಧನೆಯ ಕೈಪಿಡಿಯನ್ನು ಸಾರ್ವಜನಿಕರಿಗೆ ನೀಡಿದರು.

ಮಡಿಕೇರಿ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್, ಎಸ್.ಸಿ. ಘಟಕದ ಬ್ಲಾಕ್ ಅಧ್ಯಕ್ಷ ಸುರೇಶ್, ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಸುರೇಶ್, ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಹೆಚ್.ಎಂ. ಅಬ್ಬಾಸ್, ಹಿಂದುಳಿದ ಘಟಕದ ಬ್ಲಾಕ್ ಅಧ್ಯಕ್ಷ ಸುಂದರ್, ತಾ.ಪಂ. ಸದಸ್ಯ ಸತೀಶ್, ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಕಾಂಗ್ರೆಸ್ ವೈದ್ಯಕೀಯ ಘಟಕದ ಜಿಲ್ಲಾಧ್ಯಕ್ಷ ಡಾ. ಉದಯಕುಮಾರ್, ಬೆಸೂರು ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಮಲ್ಲೇಶ್, ಎಸ್.ಸಿ. ಶರತ್‍ಶೇಖರ್, ರಂಗಸ್ವಾಮಿ, ಎಸ್.ಎಸ್. ಶಿವಾನಂದ ಹಾಗೂ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು, ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸ್ವಾಗತಿಸಿ, ವಂದಿಸಿದರು.