ಕುಶಾಲನಗರ, ಅ. 23: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕು ಎನ್ನುವ ದಶಕಗಳ ಹಿಂದಿನ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಕಾರು ನಿಲ್ದಾಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಸರದಿ ಸತ್ಯಾಗ್ರಹ ಸೋಮವಾರ 9 ದಿನಗಳನ್ನು ಪೂರೈಸಿದೆ. ಜಯಕರ್ನಾಟಕ ಸಂಘಟನೆ ಆಶ್ರಯದಲ್ಲಿ ಸೋಮವಾರದ ಧರಣಿ ನಡೆಯಿತು.

ಬೆಳಗ್ಗೆ ಪಟ್ಟಣದ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿಯ ಗಣಪತಿ ದೇವಾಲಯದ ಎದುರು ಸೇರಿದ ಸಂಘಟನೆಯ ಕಾರ್ಯಕರ್ತರು ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಅರ್ಧ ಗಂಟೆಗೂ ಅಧಿಕ ಕಾಲ ವಾಹನ ಓಡಾಟ ಬಂದ್ ಆಗಿತ್ತು. ಈ ವೇಳೆ ತಾಲೂಕು ರಚನೆ ಪರ ಬೇಡಿಕೆಗಳನ್ನು ಕೂಗಲಾಯಿತು. ನಂತರ ಮೆರವಣಿಗೆಯಲ್ಲಿ ಶ್ರೀ ಗುಂಡೂರಾವ್ ಸತ್ಯಾಗ್ರಹ ವೇದಿಕೆ ತೆರಳಿ ಸಂಜೆ ತನಕ ಧರಣಿ ನಡೆಸಲಾಯಿತು.

ಇದಕ್ಕೂ ಮೊದಲು ಮಾತನಾಡಿದ ಜಯ ಕರ್ನಾಟಕ ಸಂಘಟನೆ ಮುಖಂಡ ಮುರಳಿ, ಕುಶಾಲನಗರ ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ಪಡೆಯುವದು ನಮ್ಮ ಹಕ್ಕಾಗಿದೆ. ಇದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಸರ್ಕಾರಕ್ಕೆ ಯಾವದೇ ಖರ್ಚು ಇಲ್ಲದೆ ತಾಲೂಕು ಕೇಂದ್ರ ರಚಿಸಬೇಕೆಂದಿದ್ದರೆ ಅದು ಕುಶಾಲನಗರದಲ್ಲಿ ಮಾತ್ರ ಸಾಧ್ಯ. ಇಲ್ಲಿ ಈಗಾಗಲೇ ಡಿವೈಎಸ್‍ಪಿ ಕಚೇರಿ, ಉಪಖಜಾನೆ, ನ್ಯಾಯಾಲಯ, ಎಪಿಎಂಸಿ ಸೇರಿದಂತೆ ಸರ್ಕಾರದ ಹಲವು ವ್ಯವಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಉಪನೋಂದಣಾಧಿಕಾರಿಗಳ ಕಚೇರಿ ಮತ್ತು ಉಪತಹಸೀಲ್ದಾರ್ ಹುದ್ದೆಯೂ ಕುಶಾಲನಗರಕ್ಕೆ ಮಂಜೂರಾಗಿದೆ. ಜನಸಂಖ್ಯೆ ಮತ್ತು ವಿಸ್ತೀರ್ಣ ಎಲ್ಲವೂ ಒಂದು ತಾಲೂಕು ರಚನೆಗೆ ಬೇಕಾದ ಅರ್ಹತೆಯಂತೆಯೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾವೇರಿ ತಾಲೂಕು ರಚನೆಯನ್ನು ಕೂಡಲೇ ಘೋಷಿಸಬೇಕು ಎಂದರು.

ಸಂಜೆ ವೇಳೆಗೆ ಶಾಸಕರುಗಳಾದ ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದರು. ತಾಲೂಕು ರಚನೆಗೆ ಕೈಗೊಂಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ ಅವರು 30 ರಂದು ನಡೆಯಲಿರುವ ಬೃಹತ್ ಹೋರಾಟದಲ್ಲಿ ತಾವುಗಳು ಪಾಲ್ಗೊಳ್ಳುವದಾಗಿ ತಿಳಿಸಿದರು.

ಧರಣಿ ಸಂದರ್ಭ ಸಂಘಟನೆಯ ಪ್ರಮುಖರಾದ ಬಿ.ಆರ್. ಮೋಹನ್, ಗುರು, ಮಹೇಶ್, ಆನಂದ್, ವಸಂತ, ಹರಿ, ಪುನಿತ್,ಲೋಕಿ, ದಿಲೀಪ್‍ಕುಮಾರ್, ಪ್ರಶಾಂತ್, ಸುರೇಶ್, ನಿವೃತ್ತ ಶಿಕ್ಷಕ ಎಂ.ಹೆಚ್. ನಜೀರ್ ಅಹಮ್ಮದ್, ಗೆಳೆಯರ ಬಳಗದ ವಿ.ಎಸ್. ಆನಂದಕುಮಾರ್, ಹೆಚ್.ಟಿ. ವಸಂತ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.