ಕುಶಾಲನಗರ, ಅ. 22: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ನೂತನ ತಾಲೂಕು ರಚನೆಗೆ ಒತ್ತಾಯಿಸಿ ಸರ್ಕಾರಕ್ಕೆ ನಡೆಯುತ್ತಿರುವ ಸರಣಿ ಸತ್ಯಾಗ್ರಹ ಭಾನುವಾರ 8ನೇ ದಿನ ಪೂರೈಸಿದೆ. ಚೇಂಬರ್ ಆಫ್ ಕಾಮರ್ಸ್‍ನ ಕುಶಾಲನಗರ ಸ್ಥಾನೀಯ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಾಮೂಹಿಕವಾಗಿ ಪಾಲ್ಗೊಂಡು ನಿರಂತರ ನಿರಶನ ಕಾರ್ಯಕ್ರಮ ಮುಂದುವರೆಸಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತರಾಜ್ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ದಿನಪೂರ್ತಿ, ಘೋಷಣೆ, ಗಾಯನಗಳ ಜೊತೆ ಪ್ರತಿಭಟನೆ ನಡೆಯಿತು. ಸಂಜೆ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಯಿತು.

ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಕೆ.ಎಸ್. ರಾಜಶೇಖರ್, ಪದಾಧಿಕಾರಿಗಳಾದ ಎಸ್.ಕೆ. ಸತೀಶ್, ಎಂ.ಡಿ. ರಂಗಸ್ವಾಮಿ, ಎಂ.ವಿ. ನಾರಾಯಣ, ಎಸ್.ಎನ್. ನರಸಿಂಹಮೂರ್ತಿ, ವಿಮಲ್ ಜೈನ್, ಪಿ.ಕೆ. ಜಗದೀಶ್, ವಿ.ಪಿ. ನಾಗೇಶ್, ಕೆ.ಎಸ್. ನಾಗೇಶ್, ವೆಂಕಟರಮಣ ರಾವ್, ರವಿ ರೈ, ಫಜಲುಲ್ಲಾ, ಜಿ.ಎಲ್. ನಾಗರಾಜ್ ಮತ್ತಿತರರಿದ್ದರು.

ಏಳನೇ ಹೊಸಕೋಟೆಯಲ್ಲಿ ಮಾನವ ಸರಪಳಿ ರಚಿಸಿ ಹೆದ್ದಾರಿ ತಡೆ

ಕಾವೇರಿ ತಾಲೂಕು ರಚನೆಯ ಬೇಡಿಕೆಗೆ ಒತ್ತಾಯಿಸಿ ಸಮೀಪದ 7ನೇ ಹೊಸಕೋಟೆ ಮತ್ತು ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು 7ನೇ ಹೊಸಕೋಟೆಯಲ್ಲಿ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆದು ಪ್ರತಿಭಟಿಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಸ್ಥಾನೀಯ ಸಮಿತಿ ಅಧ್ಯಕ್ಷ ಕೆರೆಮನೆ ಮಂಜು ಮಾತನಾಡಿ, ಗ್ರಾಮಾಂತರ ಪ್ರದೇಶದ ಕಂದಾಯ ಇಲಾಖೆಗೆ ಸಂಬಂಧಿಸಿದ ಅನೇಕ ಸಂಕಷ್ಟಗಳಿಗೆ ಸೋಮವಾರಪೇಟೆ ಬಹಳ ದೂರವಾಗುತ್ತಿದ್ದು, ಕುಶಾಲನಗರ ಕೇಂದ್ರವಾಗಿರಿಸಿಕೊಂಡ ಕಾವೇರಿ ತಾಲೂಕು ರಚನೆ ಆದಲ್ಲಿ ಜನರ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದರು.

ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಪ್ರಮುಖರಾದ ಅಬ್ದುಲ್ ಖಾದರ್, ಅಬ್ದುಲ್ ರಜಾಕ್, 7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಮಲತಾ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಇ. ಅಬ್ಬಾಸ್, ಕುಂಞÂಕುಟ್ಟಿ ಮತ್ತಿತರರು ಇದ್ದರು.