ಕೂಡಿಗೆ, ಅ. 23: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕು ಎನ್ನುವ ಜನರ ಒತ್ತಾಸೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ತೊರೆನೂರು ಕಾವೇರಿ ತಾಲೂಕು ರಚನಾ ಸ್ಥಾನೀಯ ಸಮಿತಿಯ ವತಿಯಿಂದ ತೊರೆನೂರು ಗ್ರಾಮದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.

ಈ ಸಂದರ್ಭ ಕಾವೇರಿ ತಾಲೂಕು ರಚನಾ ಸ್ಥಾನೀಯ ಸಮಿತಿಯ ಅಧ್ಯಕ್ಷ ಕೃಷ್ಣೇಗೌಡ ಮಾತನಾಡುತ್ತಾ, ಬಹು ದಿನಗಳ ಬೇಡಿಕೆಯಾಗಿರುವ ಕಾವೇರಿ ತಾಲೂಕು ರಚನೆಗೆ ಆಯಾಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸುವ ಮೂಲಕ ಕೇಂದ್ರ ಸಮಿತಿಗೆ ಬೆಂಬಲ ಸೂಚಿಸಲು ಮನೆ ಮನೆಗಳಿಂದಲೂ ಹೋರಾಟಕ್ಕೆ ಸನ್ನದ್ಧರಾಗಿದ್ದೇವೆ ಎಂದರು.

ತೊರೆನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜ್ ಮಾತನಾಡುತ್ತಾ, ಕುಶಾಲನಗರ ಕಾವೇರಿ ತಾಲೂಕು ವ್ಯಾಪ್ತಿಯ ಎಲ್ಲಾ 19 ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಕುಶಾಲನಗರ ಕೇಂದ್ರವಾಗಿಸಿಕೊಂಡು ತಾಲೂಕು ಮಾಡಿದರೆ ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತವೆ. ಈಗಾಗಲೇ ತಾಲೂಕು ರಚನೆಗೆ ಸಾರ್ವಜನಿಕ ವಲಯಕ್ಕೆ ಬೇಕಾಗುವ ಕಂದಾಯ, ನ್ಯಾಯಾಲಯ, ಜೀವವಿಮೆ ಪೊಲೀಸ್ ವ್ಯವಸ್ಥೆಗಳು ಸದೃಢವಾಗಿದೆ. ಈ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಅ.30ರ ರ್ಯಾಲಿಗೆ ಸಹಕಾರ ನೀಡುವದಾಗಿ ಹೇಳಿದರು.

ಈ ಸಂದರ್ಭ ತೊರೆನೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಮಹೇಶ್, ಕಿಶೋರ್‍ಕುಮಾರ್, ರೂಪ, ಮಂಗಳ, ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ಗಣೇಶ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್, ಜಿಲ್ಲಾ ಕಸಾಪ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಚಂದ್ರಪ್ಪ, ಜಗದೀಶ್, ಜಲಾನಯನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಚಿಕ್ಕಯ್ಯ, ನಬಾರ್ಡ್ ಅಧಿಕಾರಿ ಆರ್ಮುಗಂ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ, ಶಿರಂಗಾಲ ಗ್ರಾಮದ ಪ್ರಮುಖರುಗಳಾದ ಚಂದ್ರಶೇಖರ್, ಶ್ರೀನಿವಾಸ್ ಸೇರಿದಂತೆ ಅಳುವಾರ, ಬೈರಪ್ಪನಗುಡಿ, ತೊರೆನೂರು ಗ್ರಾಮಗಳ ವಿವಿಧ ಸಂಘಗಳ ಮಖಂಡರುಗಳು, ಗ್ರಾಮಸ್ಥರು ಹೋರಾಟದಲ್ಲಿ ಭಾಗವಹಿಸಿದ್ದರು.